ಕೊಪ್ಪಳ | ದೇವೇಂದ್ರಕುಮಾರ ಪತ್ತಾರರಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ದೇವೇಂದ್ರಕುಮಾರ ಪತ್ತಾರ
ಕೊಪ್ಪಳ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ದೇವೇಂದ್ರಕುಮಾರ ಪತ್ತಾರ ಅವರು "ಸಂಗೀತ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೇವೇಂದ್ರಕುಮಾರ ಅವರು ಡಿ.14ರ, 1955ರಂದು ಮಳಿಯಪ್ಪ ಹಾಗೂ ಯಮನವ್ವ ಪತ್ತಾರವರ ಮಗನಾಗಿ ಜನಿಸಿದ ಅವರು, ವಿರೇಶ್ವರ ಪುಣ್ಯಾಶ್ರಮ, ಗದಗದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತದಲ್ಲಿ ಗ್ವಾಲಿಯರ್ ಘರಾಣಾ ಪದ್ದತಿಯಲ್ಲಿ 12 ವರ್ಷಗಳ ಕಾಲ ಗುರುಕುಲ ಪದ್ಧತಿಯಂತೆ ತರಬೇತಿ ಪಡೆದಿದ್ದಾರೆ.
1983ರಿಂದ ಆಕಾಶವಾಣಿ ಧಾರವಾಡ ಹಾಗೂ ಕಲಬುರಗಿ ಕೇಂದ್ರಗಳಲ್ಲಿ ಬಿ ಹಾಗೂ ಹೈ ಶ್ರೇಣಿಯ ಕಲಾವಿದರಾಗಿ ನಿರಂತರವಾಗಿ ಸಂಗೀತ ಸೇವೆ ಸಲ್ಲಿಸುತ್ತಾ ಬಂದಿರುವ ಅವರು, ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಶ್ರೋತೃ ಮನ ಗೆದ್ದಿದ್ದಾರೆ.
ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳ ಸ್ಮರಣಾರ್ಥವಾಗಿ ತಮ್ಮದೇ ಆದ ಸಂಗೀತ ಶಾಲೆಯನ್ನು ಪ್ರಾರಂಭಿಸಿ, ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ತರಬೇತಿ ನೀಡುತ್ತಿರುವುದು ಇವರ ಸೇವೆಯ ವಿಶಿಷ್ಟತೆ. ಅವರ ಶಿಷ್ಯರಲ್ಲಿ ಹಲವರು ಈಗ ಕಲಾವಿದರು ಹಾಗೂ ಸಂಗೀತ ಶಿಕ್ಷಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಗೀತ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹ ನೀಡಿದ್ದಾರೆ. ಸಂಗೀತ ಸಮಾರಂಭಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದ್ದಾರೆ. ಪತ್ತಾರವರ ಸಂಗೀತ ಸೇವೆಗೆ ನಾನಾ ಪ್ರಶಸ್ತಿಗಳು ದೊರೆತಿವೆ.







