ಕೊಪ್ಪಳ | ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ಅಗತ್ಯ: ವಿಠ್ಠಲ್ ಜಾಬಗೌಡರ

ಕೊಪ್ಪಳ: ಇಂದಿನ ದಿನಗಳಲ್ಲಿ ಸ್ವಯಂರಕ್ಷಣೆಗಾಗಿ ಕರಾಟೆ ಅತೀ ಅಗತ್ಯವಾದ ಕ್ರೀಡೆಯಾಗಿದ್ದು, ಎಲ್ಲರೂ ಕಲಿಯಬೇಕಾದ ಕ್ರೀಡೆಯಾಗಿದೆ. ಕರಾಟೆಯನ್ನು ಎಲ್ಲ ಶಾಲೆ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ ಹೇಳಿದರು.
ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಾಗೂ ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡಮಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ ಹಾಗೂ ಬೆಲ್ಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರಿಗೆ ಡ್ರಾಗನ್ ಸ್ಟಿಕ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೈಹಿಕವಾಗಿ ಶಕ್ತಿವಂತರಾಗಲು ಹಾಗೂ ಆರೋಗ್ಯಕರ ಮನಸ್ಸು ಬೆಳೆಸಲು ಕ್ರೀಡೆಗಳು ಸಹಕಾರಿಯಾಗುತ್ತವೆ. ಕರಾಟೆ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಏಕಾಗ್ರತೆ ಹೆಚ್ಚುತ್ತದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಬೆಲ್ಟ್ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಎಪಿಜೆ ಅಬ್ದುಲ್ ಕಲಾಂ ಸಿಬಿಎಸ್ಸಿ ಶಾಲೆ ಲಿಂಗದಳ್ಳಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್ ಹಾಗೂ ಹಿಟ್ನಾಳ ಶಾಲೆಯ ಸುಮಾರು 250 ವಿದ್ಯಾರ್ಥಿನಿಯರು 2025–26ನೇ ಸಾಲಿನಲ್ಲಿ ಪಡೆದ ಕರಾಟೆ ತರಬೇತಿಯ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಅವರಿಗೆ ಬೆಲ್ಟ್ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಪ್ರಾಸ್ತಾವಿಕವಾಗಿ ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ ಮುಖ್ಯಸ್ಥ ರಾಜಾಬಕ್ಷಿ ಎಚ್.ವಿ ನೆರವೇರಿಸಿದರು. ಅದ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್ ಅಲಿ ವಹಿಸಿದ್ದರು. ವೇದಿಕೆಯ ಮೇಲೆ ನ್ಯಾಷನಲ್ ಶುಟೋಕಾನ್ ಕರಾಟೆ ಅಸೋಶಿಯೇಷನ್ ಕರ್ನಾಟಕದ ಅಧ್ಯಕ್ಷರಾದ ಬಿ.ಬಾಷಾಸಾಹೇಬ, ಹಿರಿಯ ಹೋರಾಟಗಾರ ನಜೀರ್ ಮೂಲಿಮನಿ, ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಷಾ, ತರಬೇತುದಾರರಾದ ದೀಪಾ ಮತ್ತು ರೋಹಿಣಿ ಉಪಸ್ತಿತರಿದ್ದರು. ನಿರೂಪಣೆಯನ್ನು ದಾವಲಸಾಬ ಬೆಟಗೇರಿ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ದೇವಪ್ಪ ಕಲ್ಲನ್ನವರ ಮಾಡಿದರು.







