ಕೊಪ್ಪಳ | ಮಹಿಳಾ ಸುರಕ್ಷತೆಗೆ ಅಕ್ಕಪಡೆ ಬಲವಾಗಲಿ: ಜ್ಯೋತಿ ಎಂ.ಗೊಂಡಬಾಳ

ಕೊಪ್ಪಳ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ಪರ ಮತ್ತೊಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಅಕ್ಕಪಡೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆದರ್ಶ ಹಾಗೂ ದಿಟ್ಟತನದಂತೆ ಕಾರ್ಯನಿರ್ವಹಿಸಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ಮನವಿ ಮಾಡಿದರು.
ಅವರು ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪೊಲೀಸ್ ಔಟ್‌ಪೋಸ್ಟ್ ಹತ್ತಿರ, ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಲಾದ ಮಹಿಳೆಯರ ಸಂರಕ್ಷಣಾ ಕಾರ್ಯಕ್ರಮ ಅಕ್ಕಪಡೆ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಿರುವಂತೆ, ದೌರ್ಜನ್ಯ ಹಾಗೂ ಸಂಕಷ್ಟಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತು ಸಹಾಯ ಒದಗಿಸಲು ಅಕ್ಕಪಡೆ ಸದಾ ಸನ್ನದ್ಧವಾಗಿರುತ್ತದೆ. ಮಹಿಳೆಯರ ಸುರಕ್ಷತೆಗೆ ಅಗ್ರ ಆದ್ಯತೆ ನೀಡಲಾಗಿದ್ದು, ರಾಜ್ಯಾದ್ಯಂತ ಇರುವ ಸಹಾಯವಾಣಿ ವ್ಯವಸ್ಥೆಯ ಮೂಲಕ ಮಹಿಳೆಯರನ್ನು ತಲುಪಲು ಅಕ್ಕಪಡೆ ಲಭ್ಯವಿರುತ್ತದೆ. ದೂರದ ಪ್ರದೇಶಗಳಿಂದ ಕರೆ ಬಂದರೂ ತಕ್ಷಣ ಸ್ಪಂದಿಸಿ ಸಹಾಯ ಒದಗಿಸಲಾಗುತ್ತದೆ ಎಂದು ಹೇಳಿದರು.
ದೂರುಗಳಿಗೆ ತಂಡವು ತ್ವರಿತವಾಗಿ ಪ್ರತಿಕ್ರಿಯಿಸಲಿದೆ. ಗಂಭೀರ ಪ್ರಕರಣಗಳಲ್ಲಿ ಆರೋಪಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುತ್ತದೆ. ಅಕ್ಕಪಡೆಯ ಸದಸ್ಯರಿಗೆ ಹಿಂಸಾಚಾರ ಪ್ರಕರಣಗಳ ನಿರ್ವಹಣೆ, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಅಲ್ಲದೇ ವಿದ್ಯಾರ್ಥಿಗಳು ಮತ್ತು ಮಹಿಳೆಯರಲ್ಲಿ ಬಾಲ್ಯವಿವಾಹ ನಿಷೇಧ, ಪೋಕ್ಸೊ ಕಾಯಿದೆ, ಮಹಿಳಾ ಸುರಕ್ಷತೆ ಹಾಗೂ ಮೊಬೈಲ್ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಜೊತೆಗೆ 1098, 112 ಮತ್ತು 1930 ಸಹಾಯವಾಣಿ ಸಂಖ್ಯೆಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಇಷ್ಟೆಲ್ಲಾ ಸಮಾಜಮುಖಿ ಕೆಲಸ ಮಾಡುತ್ತಿರುವ ಅಕ್ಕಪಡೆಗೆ ಮಹಿಳಾ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಗಾಂಧೀಜಿ ಅವರ ಕನಸಿನಂತೆ ಮಹಿಳೆ ಸ್ವಾಭಿಮಾನದಿಂದ ಹಾಗೂ ಸ್ವತಂತ್ರವಾಗಿ ಬದುಕಲು ಅಗತ್ಯವಾದ ಸುರಕ್ಷತೆಯನ್ನು ನೂತನ ಅಕ್ಕಪಡೆ ಇನ್ನಷ್ಟು ಬಲಪಡಿಸುವುದು ಖುಷಿಯ ಸಂಗತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಕಪಡೆ ಸಿಬ್ಬಂದಿಗಳಾದ ಪೊಲೀಸ್ ಇಲಾಖೆಯ ಸಾವಿತ್ರಿ ಡಿ. ಮತ್ತು ಈರಣ್ಣ ತಾವರಗೇರಾ, ಹೋಮ್ ಗಾರ್ಡ್‌ಗಳಾದ ಯಲ್ಲಮ್ಮ ಎನ್. (ಕೊಪ್ಪಳ), ನಾಗರತ್ನ (ಗಂಗಾವತಿ), ಭಾಗ್ಯ (ಗಂಗಾವತಿ) ಹಾಗೂ ತಾಯೇರಾ ಬೇಗಂ ಅವರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಮುಖಂಡರಾದ ಕಿಶೋರಿ ಬೂದನೂರ್, ಜಯಶ್ರೀ ಕಂದಕೂರ್, ಕೆಡಿಪಿ ಸದಸ್ಯೆ ನಾಗರತ್ನ ಹುಲಿಗಿ, ರೇಷ್ಮಾ ಖಾಜಾವಲಿ, ಸುಮಂಗಲಾ ನಾಯಕ್, ಸೌಭಾಗ್ಯ ಗೊರವರ್, ಶರಣಮ್ಮ ಪೂಜಾರಿ, ಜಯಶ್ರೀ ಅರಕೇರಿ, ಶಿಲ್ಪಾ ಗುಡ್ಲಾನೂರ್, ಅನಿತಾ ಅಳ್ಳಮ್ಮನವರ, ಗ್ಯಾರಂಟಿ ಸಮಿತಿ ಸದಸ್ಯೆ ರೇಣುಕಮ್ಮ ಕಾರಟಗಿ, ಮುತ್ತಮ್ಮ ಕಾರಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







