ಕೊಪ್ಪಳ | ಶೋಷಣೆಯಿಂದ ಹೊರಬರಲು ಶಿಕ್ಷಣವನ್ನು ಒಂದು ಅಸ್ತ್ರವಾಗಿ ಮಾಡಿಕೊಳ್ಳಿ: ಕೃಷ್ಣ ಇಟ್ಟಂಗಿ

ಕೊಪ್ಪಳ : ಶಿಕ್ಷಣಕ್ಕಿಂತ ಬಲವಾದ ಅಸ್ತ್ರ ಮತ್ತೊಂದಿಲ್ಲ. ಉತ್ತಮ ಶಿಕ್ಷಣ ಪಡೆಯುವ ಮೂಲಕ ನಾವು ಸಮಾಜದಲ್ಲಿ ಗೌರವಿತವಾದ ಸ್ಥಾನವನ್ನು ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾ ಚಲವಾದಿ ಜಾಗೃತಿ ವೇದಿಕೆಯ ಸಂಚಾಲಕ ಕೃಷ್ಣ ಇಟ್ಟಂಗಿ ಹೇಳಿದರು.
ಕುಕುನೂರಿನಲ್ಲಿ ನಡೆದ ಕೊಪ್ಪಳ ಜಿಲ್ಲಾ ಚಲವಾದಿ ಜಾಗೃತಿ ವೇದಿಕೆಯ 2025 ನೇ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ಸಮಾಜದಿಂದ ಬಂದಿರುವ ನಮ್ಮ ಸಮಾಜದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಮುಖಾಂತರ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶೋಷಣೆಯಿಂದ ಹೊರಬರಲು ಉತ್ತಮ ಶಿಕ್ಷಣ ಪಡೆಯುವದೊಂದೆ ನಮಗಿರುವ ಅಸ್ತ್ರ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಗೊಳಿಸಬೇಕು ಸಮಾಜ ಬಾಂಧವರನ್ನು ತಮ್ಮ ಸಹಾಯ ಸಹಕಾರ ನೀಡಬೇಕೆಂದು ಕೋರಿದರು.
2024-25ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಅಂಕ ಪಡೆದ ಛಲವಾದಿ ಸಮಾಜದ ವಿದ್ಯಾರ್ಥಿಗಳಿಗೆ ಮತ್ತು ಎಂ.ಬಿ.ಬಿ.ಎಸ್. ಗೆ ಆಯ್ಕೆ ಆದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರಕಾರಿ ಉದ್ಯೋಗ ಪಡೆದ ಪ್ರತಿಭಾವಂತರಿಗೆ ಬರುವ ಅಗಸ್ಟ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.
ಸದರಿ ಕಾರ್ಯಕ್ರಮಕ್ಕೆ ಸಮಾಜದ ಸಚಿವರುಗಳಾದ ಹೆಚ್.ಸಿ ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕೊಪ್ಪಳ ಲೋಕಸಭಾ ಸದಸ್ಯ ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಸಕರನ್ನು, ಆಹ್ವಾನಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಮಣ್ಣ ಬಂಕಡಮನಿ, ಛತ್ರಪ್ಪ ಛಲವಾದಿ, ಉಪನ್ಯಾಸಕ ಶಂಕರ್ ಛಲವಾದಿ, ರಾಜೇಶ್ ಯಾವಗಲ್, ನ್ಯಾಯವಾದಿ ಬಸವರಾಜ ಜಂಗ್ಲಿ, ಹನುಮಂತಪ್ಪ ಛಲವಾದಿ, ರಮೇಶ್ ಛಲವಾದಿ, ರಾಮಚಂದ್ರ ಕುಷ್ಟಗಿ,ದುರುಗೇಶ್ ನವಲಿಹಳ್ಳಿ, ಶಂಕರ್ ಜಕ್ಕಲಿ, ಶಶಿಧರ್ ಹೊಸಮನಿ, ರಾಘವೇಂದ್ರ ಕಾತರಕಿ,ಯಲ್ಲಪ್ಪ ಕಲ್ಮನಿ, ಬಾಲರಾಜ್ ಛಲವಾದಿ, ಗದ್ದೆಪ್ಪ, ಲಕ್ಷ್ಮಣ ಕಾಳೆ, ಡಿ.ಕೆ ಪರಶುರಾಮ್, ತಿಪ್ಪಣ್ಣ ಹಿರೇಮ್ಯಾಗೇರಿ, ಯಮನೂರಪ್ಪ ಬಳೂಟಗಿ, ಹನುಮಂತ ಕಾತರಕಿ, ಕನಕೇಶ್ ಪೇಂಟರ್, ಸಿದ್ದಪ್ಪ ಮುರಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.