ಕೊಪ್ಪಳ | ಸಂಸದ ಹಿಟ್ನಾಳ್ ಹೇಳಿಕೆ ಖಂಡನಾರ್ಹ: ಬಸವರಾಜ ಕ್ಯಾವಟರ್

ಕೊಪ್ಪಳ: ಸಾಣಾಪೂರ ಬಳಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ವಿದೇಶಿ ಪ್ರಜೆಯ ಕೊಲೆ ಪ್ರಕರಣವನ್ನು ‘ಸಣ್ಣ ಘಟನೆ’ ಎಂದು ಸಂಸದ ರಾಜಶೇಖರ ಹಿಟ್ನಾಳ್ ಹೇಳಿರುವುದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೈದ್ಯ ಬಸವರಾಜ ಕ್ಯಾಟವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಸಂಸದರಿಗೆ ಇಂತಹ ಹೇಳಿಕೆ ಶೋಭೆಯಲ್ಲ ಎಂದು ಹೇಳಿದರು.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸಹಕಾರದೊಂದಿಗೆ ಆಯೋಜಿಸಿದ್ದ ‘ಕೊಪ್ಪಳ ಅನ್ವೇಷಿಸಿ’ ಎಂಬ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಬ್ಲಾಗರ್‌ಗಳು ಹಾಗೂ ಪ್ರವಾಸಿ ಮಿತ್ರರ ಎದುರು ಹಿಟ್ನಾಳ್ ಅವರು ಇಂತಹ ಅಸಂಬದ್ಧ ಹೇಳಿಕೆ ನೀಡಿ ಜಿಲ್ಲೆಯ ಮಾನಮರ್ಯಾದೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಆನೆಗೊಂದಿ ಭಾಗದಲ್ಲಿ ಡ್ರಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆಡಳಿತ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಬೆಂಬಲದಿಂದಲೇ ಇಂತಹ ಅಕ್ರಮಗಳು ನಡೆಯುತ್ತಿವೆ. ಇವುಗಳಿಗೆ ಕಡಿವಾಣ ಹಾಕದಿರುವುದೇ ಇಂತಹ ದುರ್ಘಟನೆಗಳು ಸಂಭವಿಸಲು ಕಾರಣವಾಗಿದೆ ಎಂದು ಹೇಳಿದರು.
ಪೊಲೀಸ್ ಬೀಟ್ ವ್ಯವಸ್ಥೆಯನ್ನು ಬಲಪಡಿಸಿ, ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಿದರೆ ದೇಶಿ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಸಾಧ್ಯತೆ ಇದೆ. ಆದರೆ, ಪ್ರವಾಸೋದ್ಯಮ ಉತ್ತೇಜಿಸುವ ವೇದಿಕೆಯಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ‘ಚಿಕ್ಕ ಘಟನೆ’ ಎಂದು ಬಿಂಬಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅವರು ಹೇಳಿದರು.
ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ವಿದೇಶಿ ಪ್ರಜೆಯ ಕೊಲೆ ಪ್ರಕರಣದ ನಂತರ ಆನೆಗೊಂದಿ ಭಾಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಶೇ.50ರಷ್ಟು ಕುಸಿದಿದೆ. ಪ್ರತಿ ವರ್ಷ ಸುಮಾರು 30 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದರೆ, ಇದೀಗ ಅದರ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದಕ್ಕೆ ಆಡಳಿತ ಪಕ್ಷದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ಸಣ್ಣದಾಗಿ ಕಾಣುವ ಮನಸ್ಥಿತಿಯಿಂದ ಸಂಸದ ಹಿಟ್ನಾಳ್ ಹೊರಬರಬೇಕು. ಪ್ರವಾಸಿಗರಿಗೆ ಭದ್ರತೆ ಒದಗಿಸಿ ಪ್ರವಾಸೋದ್ಯಮ ಉತ್ತೇಜಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಬಸವರಾಜ ಕ್ಯಾಟವರ್ ಅವರು ಒತ್ತಾಯಿಸಿದ್ದಾರೆ.







