ಕೊಪ್ಪಳ | ಬಲ್ಡೋಟಾ ಕಾರ್ಖಾನೆ ವಿರುದ್ಧ ಜನಾದೋಲನದ ಅಗತ್ಯವಿದೆ : ತೋಂಟದಶ್ರೀ

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರುದ್ಧ ಒಂದು ಜನಾದೋಲನದ ಅಗತ್ಯವಿದೆ ಎಂದು ಗದಗಿನ ತೋಂಟದಾರ್ಯ ಸ್ವಾಮಿಗಳು ಹೇಳಿದರು.
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಆನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಆವರು, ವಾಯು ಪರಿಶುದ್ಧವಾಗಿರುವಾಗ ಮಾತ್ರ ಮನುಷ್ಯ ಅರೋಗ್ಯದಿಂದ ಇರಲು ಸಾಧ್ಯ. ಆದರೆ, ಇಲ್ಲಿ ಅರೋಗ್ಯದಿಂದ ಇರಲು ಗಾಳಿ, ನೀರು ಅಶುದ್ಧವಾಗಿದೆ ಎಂದು ಹೇಳಿದರು.
ಕೊಪ್ಪಳ ಪರಿಶುದ್ಧ ಗಾಳಿಯಲ್ಲಿ 6 ನೇ ಸ್ಥಾನ ಇದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ವರದಿ ಮಾಡುವವರು ಬಾದಿತ ಗ್ರಾಮಗಳಿಗೆ ಹೋಗಿಲ್ಲ ಅನಿಸುತ್ತದೆ ಒಂದು ವೇಳೆ ಅವರು ಇಲ್ಲಿಗೆ ಹೋಗಿದ್ದರೆ ಇಂತಹ ವರದಿ ಪ್ರಕಟಿಸುತ್ತಿರಲಿಲ್ಲ. ಕೊಪ್ಪಳ ಜಿಲ್ಲೆಯ ಈ ಹೋರಾಟವನ್ನು ಮಾದ್ಯಮಗಳು ವ್ಯಾಪಕವಾಗಿ ಸುದ್ದಿ ಮಾಡಬೇಕು. ಈ ಹೋರಾಟ ಇಡೀ ಉತ್ತರ ಕರ್ನಾಟಕ್ಕೆ ವ್ಯಾಪಿಸಬೇಕು ಎಂದು ಹೇಳಿದರು.
ಹೋರಾಟದಲ್ಲಿ ಸಂಚಾಲಕರಾದ ಕೆ.ಬಿ.ಗೋನಾಳ, ಡಿ.ಹೆಚ್.ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಸಾಹಿತಿ ಡಿ.ಎಂ. ಬಡಿಗೇರ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹಿಳಾ ಕಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಪುಷ್ಪಲತಾ ಏಳುಬಾವಿ, ಮಾಲಾ ಬಡಿಗೇರ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಎಂ.ಎಸ್.ಘಂಟಿ, ಕಾಶಪ್ಪ ಛಲವಾದಿ, ಭೀಮಸೇನ ಕಲಿಕೇರಿ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್.ಮಾವಿನಮಡು, ಮುದುಕಪ್ಪ ಹೊಸಮನಿ ಸೇರಿ ಅನೇಕರಿದ್ದರು.
ಪ್ರತ್ಯೇಕ ರಾಜ್ಯ ಕೇಳಲು ಇಂತಹ ಪರಿಸ್ಥಿತಿ ಕಾರಣವಾಗುತ್ತವೆ :
ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದದ ಕಾರಣ, ಪರಿಸರ ವಿರೋಧಿ ಹಾಗೂ ಜನರ ಹೋರಾಟವನ್ನು ಗಮನಿಸದೆ ಇರುವದು ನೋವು ತಂದಿದೆ. ಬಾಧಿತ ಪ್ರದೇಶಕ್ಕೆ ಭೇಟಿ ನೀಡದೆ, ಪ್ರತಿಭಟನೆ ಗಮನಿಸದ, ಜನರ ಕೂಗು ಕೇಳದ ಸರಕಾರಗಳ ಇಂತಹ ಧೋರಣೆಗಳೇ ಪ್ರತ್ಯೇಕ ರಾಜ್ಯದ ಕೂಗಿಗೆ ಪುಷ್ಟಿ ನೀಡುತ್ತವೆ.
-ಅಲ್ಲಮಬ್ರಭು ಬೆಟ್ಟದೂರು, ಹೋರಾಟಗಾರರು
ಈಗಾಗಲೇ ಕಾರ್ಖಾನೆ ವಿಸ್ತರಣೆಯ ಕೆಲಸಗಳನ್ನು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಿಲ್ಲಿಸಲಾಗಿದೆ. ಈ ಪ್ರತಿಭಟನಾ ಸ್ಥಳಕ್ಕೆ ನಾನು ಮುಖ್ಯಮಂತ್ರಿಗಳ ಸೂಚನೆಯ ಮೆರೆಗೆ ಬಂದಿದ್ದು, ತಮ್ಮ ಬೇಡಿಕೆಗಳ ಕುರಿತು ಜಿಲ್ಲೆಯ ಶಾಸಕರು ಮತ್ತು ಸಂಸದರೊಂದಿಗೆ ಚರ್ಚಿಸುತ್ತೇನೆ ಮತ್ತು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ಯಾಬಿನೆಟ್ ನಲ್ಲಿ ಕೂಡ ಚರ್ಚಿಸುವ ಕೆಲಸ ಮಾಡುತ್ತೇವೆ.
-ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರು, ಕೊಪ್ಪಳ







