ಕೊಪ್ಪಳ | ಗೋವಿನ ಚರ್ಮವೆಂದು ಆಡಿನ ಚರ್ಮ ವಶಕ್ಕೆ ಪಡೆದ ಪೊಲೀಸರು: ಬೇಸರ ವ್ಯಕ್ತಪಡಿಸಿದ ನ್ಯಾಯಾಧೀಶರು
ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿ ಎಂದು ಎಸ್ಪಿ, ಐಜಿಪಿಗೆ ಸೂಚನೆ

ಸಾಂದರ್ಭಿಕ ಚಿತ್ರ (PTI)
ಕೊಪ್ಪಳ/ ಕುಷ್ಟಗಿ : ಟಾಟಾ ಏಸ್ ವಾಹನದಲ್ಲಿ ಮಂಜುನಾಥ್ ಚನ್ನಪ್ಪ ಹಾದಿಮನಿ ಎಂಬವರು ಕುರಿ ಆಡಿನ ಚರ್ಮವನ್ನು ಸಂಗ್ರಹ ಮಾಡಿ ತಮ್ಮ ವಾಹನದಲ್ಲಿ ಸಾಗಿಸುತ್ತಿರುವಾಗ ಕುಷ್ಟಗಿ ಪೊಲೀಸರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇದರ ಬಗ್ಗೆ ಜಿಲ್ಲಾ ನ್ಯಾಯಾಧೀಶರಾದ ಟಿ.ಚಂದ್ರಶೇಖರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕುರಿ, ಆಡು ಮತ್ತು ಆಕಳು ಇವುಗಳ ಬಗ್ಗೆ ವ್ಯತ್ಯಾಸದ ಬಗ್ಗೆ ಯಾವುದೇ ಒಂದು ಜ್ಞಾನವಿಲ್ಲದೆ ಪೊಲೀಸರು ಕಾನೂನಿನಲ್ಲಿರುವ ಪರಿಭಾಷೆಯನ್ನು ಓದದೆ ತಪ್ಪಾಗಿ ಪ್ರಕರಣವನ್ನು ದಾಖಲಿಸಿದ್ದು, ಪೊಲೀಸರ ಈ ವರ್ತನೆಯ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಎಂದು ಕರೆಯಲ್ಪಡುವ ಈ ಕಾಯ್ದೆ ಆಡಿಯಲ್ಲಿ ಹತ್ಯೆಯ ಬಗ್ಗೆ ಪ್ರಕರಣವನ್ನು ದಾಖಲಿಸಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಆದರೆ ಎಲ್ಲಾ ವಯಸ್ಸಿನ ಆಕಳು, ಆಕಳು-ಕರು, ಎತ್ತು ಹಾಗೂ 13 ವರ್ಷದ ಒಳಗಿನ ಎಮ್ಮೆ ಅಥವಾ ಕೋಣಗಳು ಮಾತ್ರ ಈ ಕಾಯ್ದೆಯ ಅಡಿಯಲ್ಲಿ ಬರುತ್ತದೆ. ಪ್ರಕರಣವನ್ನು ದಾಖಲಿಸುವುದಲ್ಲದೆ ಅಂತಿಮ ವರದಿಯನ್ನು ಸಹ ಇದೇ ಕಾಯ್ದೆ ಅಡಿಯಲ್ಲಿ ಸಲ್ಲಿಸಿ ಪೊಲೀಸರು ತಮ್ಮ ಮೂರ್ಖತನದ ಪರಮಾವಧಿಯನ್ನು ಎತ್ತಿ ತೋರಿಸಿದ್ದು, ಕಾನೂನಿನ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸದೆ ಇದ್ದ ಕಾರಣ ಆರೋಪಿಗೆ ಜಾಮೀನನ್ನು ಮಂಜೂರು ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಐಜಿಪಿ, ಬಳ್ಳಾರಿ ಇವರಿಗೆ ಸೂಕ್ತ ಕ್ರಮಕೈಗೊಳ್ಳಲು ಹಾಗೂ ತರಬೇತಿಯನ್ನು ನೀಡಲು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ.