ಕೊಪ್ಪಳ | ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಶಿಕ್ಷೆ

ಕೊಪ್ಪಳ: ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ನ್ಯಾಯಾಲಯವು 20 ವರ್ಷ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದೆ.
ಈ ಕುರಿತು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯದ (ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ.ಅವರು ಆರೋಪಿ ವಿನೋದ ಕೊತಬಾಳ ಮೇಲಿನ ಆರೋಪಣೆಗಳು ಸಾಭೀತಾಗಿದ್ದರಿಂದ 20 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ಗಳ ದಂಡವನ್ನು ಭರಿಸುವಂತೆ ಅದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಜಿಲ್ಲೆಯ ಹನುಮಸಾರ ಪೊಲೀಸ್ ಠಾಣೆ ವ್ಯಾಪ್ತಿಯ ನಿಲೋಗಲ್ ಗ್ರಾಮ ಸೀಮಾದ ಜಮೀನೊಂದರಲ್ಲಿ ಬಾಧಿತ ಬಾಲಕಿ ತನ್ನ ಗೆಳತಿಯೊಂದಿಗೆ ಬಹಿರ್ದೇಸೆಗೆ ಹೋಗಿದ್ದಳು. ಈ ವೇಳೆ ಆರೋಪಿ ವಿನೋದ ಹಾಗೂ ಇನ್ನೋರ್ವ ಕಾನೂನು ಸಂಘರ್ಷಕ್ಕೊಳಾದ ಬಾಲಕನು ಸೇರಿಕೊಂಡು ತನ್ನ ಜೊತೆ ಬರುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಬಾಲಕಿ ಇಲ್ಲಿಂದ ಹೋಗುವಂತೆ ಹೇಳಿದಾಗ ಆರೋಪಿಗಳಿಬ್ಬರು ನಿನ್ನನ್ನು ಜೀವಂತ ಬಿಡುವುದಿಲ್ಲವೆಂದು ಹೆದರಿಸಿದ್ದಾರೆ. ಬಾಧಿತಳು ಜೋರಾಗಿ ಕಿರುಚಾಡಿ ಅಳುತ್ತ ವಿರೋಧಿಸಿದರೂ ಅಪರಾಧಿ ವಿನೋದ ಬಾಲಕಿಯ ಬಾಯಿ ಮುಚ್ಚಿ, ಮುಳ್ಳಿನ ಕಂತೆಯ ಮರೆಗೆ ಎಳೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದನು.
ಆ ಸಂದರ್ಭದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಬಾಧಿತಳ ಗೆಳತಿಯನ್ನು ಹೆದರಿಸಿ ತನ್ನ ಬಳಿಯಲ್ಲೆ ನಿಲ್ಲಿಸಿಕೊಂಡಿದ್ದನು. ಬಾಲಕಿಯ ಚೀರಾಡುವ ಧ್ವನಿ ಕೇಳಿ ಗ್ರಾಮದ ಜನರು ಓಡಿ ಬಂದು ನೋಡಿದಾಗ ಆರೋಪಿ ವಿನೋದ ಮತ್ತು ಕಾನೂನು ಸಂಘರ್ಷಕ್ಕೊಳಾದ ಬಾಲಕ ಇಬ್ಬರೂ ಸ್ಥಳದಿಂದ ಓಡಿ ಹೋಗಿದ್ದರು. ಈ ವೇಳೆ ಅಲ್ಲಿಂದ ಹೋಗುವಾಗ ಈ ವಿಷಯವನ್ನು ಮನೆಯಲ್ಲಿ ಹೇಳಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವದ ಹೆದರಿಕೆ ಹಾಕಿರುವ ಬಗ್ಗೆ ಹನುಮಸಾಗರ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರನ್ನು ಸ್ವೀಕರಿಸಿದ ಪಿಎಸ್‌ಐ ಸುನೀಲ ಎಚ್. ಅವರು ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿದ್ದರು, ಕುಷ್ಟಗಿ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್ ಅವರು ಮುಂದಿನ ತನಿಖೆಯನ್ನು ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪ್ರತ್ಯೇಕ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣದ ವಾದ ಮಂಡಿಸಿದ್ದರು. ಹನುಮಸಾಗರ ಪೋಸ್ ಠಾಣೆಯ ಸಿಬ್ಬಂದಿ ಅಮರೇಶ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿಯು ಪ್ರಕಟಣೆ ತಿಳಿಸಿದೆ.







