ಕೊಪ್ಪಳ | ಅಣ್ಣನಿಂದಲೇ ಅತ್ಯಾಚಾರ : ಮಗುವಿಗೆ ಜನ್ಮನೀಡಿದ ಅಪ್ರಾಪ್ತೆ

ಕೊಪ್ಪಳ : ಸ್ವಂತ ಅಣ್ಣನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದ್ದು, 17 ವರ್ಷದ ಬಾಲಕಿಯು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
“ಮನೆಯಲ್ಲಿ ನಾವು ಮೂವರು ಮಕ್ಕಳಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭಗಳಲ್ಲಿ ನನ್ನ ಅಣ್ಣ ‘ನಿನ್ನನ್ನು ಮದುವೆಯಾಗುತ್ತೇನೆ, ಯಾರೇ ಏನೆಂದರು ಪರವಾಗಿಲ್ಲ, ನಿನ್ನನ್ನು ಯಾವತ್ತೂ ಕೈ ಬಿಡುವುದಿಲ್ಲ’ ಎಂದು ಪುಸುಲಾಯಿಸುತ್ತಿದ್ದ. ಅಣ್ಣ ತಂಗಿಯೇ ಈ ರೀತಿ ಮಾಡಿದರೆ ಸಮಾಜ ನಮನ್ನು ಒಪ್ಪುವುದಿಲ್ಲ ಎಂದು ಆರಂಭದಲ್ಲಿ ನಾನು ವಿರೋಧಿಸಿದೆ. ಆದರೆ ಆತನೇ ನನ್ನನ್ನು ಸ್ವಇಚ್ಛೆಯಿಂದ ಶರಣಾಗುವಂತೆ ಮಾಡಿಸಿಕೊಂಡ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭಗಳಲ್ಲಿ ನಾವು ಇಬ್ಬರೂ ದೈಹಿಕ ಸಂಪರ್ಕ ಮಾಡಿಕೊಂಡಿದ್ದೇವೆ” ಎಂದು ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ.26ರಂದು ಬಾಲಕಿ ಕೆಲಸ ಮಾಡುವಾಗ ಜಾರಿಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದ ಕಾರಣದಿಂದ ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಬಂದಾಗ, ಬಾಲಕಿ ಗರ್ಭಿಣಿ ಎಂಬುದು ಕುಟುಂಬದವರಿಗೆ ತಿಳಿದುಬಂದಿದೆ. ನಾಲ್ಕು ದಿನಗಳ ಬಳಿಕ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಕಾರಣ ಯಾರು ಎಂಬುದು ಕುಟುಂಬಕ್ಕೆ ತಿಳಿದಿರಲಿಲ್ಲ. ನಂತರ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕುಟುಂಬದವರಿಗೆ ಗೊತ್ತಾಗಿದೆ.
ಈ ಕುರಿತು ಭಾರತೀಯ ನ್ಯಾಯ ಸಂಹಿತೆ-2023 ಹಾಗೂ ಕಲಂ 6 – ಪಾಕ್ಸೋ ಕಾಯ್ದೆ ಅಡಿಯಲ್ಲಿ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 21 ವರ್ಷದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







