Koppal | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಲಾಟೆ: 31 ಜನರ ವಿರುದ್ಧ FIR ದಾಖಲು

ಕೊಪ್ಪಳ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಹಾಕುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ 31 ಜನರ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಾಗೇಶನಹಳ್ಳಿ ಗ್ರಾಮದ ರವಿ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 189(2), 191(2), 118(1), 115(2), 351(2), 352 ಹಾಗೂ 191 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r), 3(1)(s), 3(2)(va) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೆ.16ರಂದು ನಾಗೇಶನಹಳ್ಳಿಯಲ್ಲಿ ಇಮ್ಮಡಿ ಪುಲಿಕೇಶಿ ಯುವಕ ಮಿತ್ರಮಂಡಳಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ರಾತ್ರಿ 11.30ರ ಸುಮಾರಿಗೆ ಮೆರವಣಿಗೆಯು ಮೈಲಮ್ಮದೇವಿ ದೇವಸ್ಥಾನದ ಬಳಿ ಬಂದಾಗ ಡಿಜೆ ಧ್ವನಿ ಹೆಚ್ಚಾಗಿದ್ದರಿಂದ ರಮೇಶ್ ಎಂಬವರು ಶಬ್ದ ಕಡಿಮೆ ಮಾಡುವಂತೆ ಕೇಳಿದ್ದರು. ಈ ವೇಳೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರವಿ ದೂರಿನಲ್ಲಿ ಆರೋಪಿಸಿದ್ದಾರೆ.
ದೇವಸ್ಥಾನದ ಬಳಿ ಇರಿಸಿದ್ದ ಗಣೇಶ ಮೂರ್ತಿಯನ್ನು ಹೊರಗೆ ಎಸೆಯುವುದಾಗಿ ಕೆಲವರು ಹೇಳಿದ್ದರಿಂದ ಹಿರಿಯರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮಂಜುನಾಥ ಈಳಿಗೇರ, ಮಂಜುನಾಥ ಚಮಕನಹಳ್ಳಿ ಸೇರಿದಂತೆ 31 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






