ಕೊಪ್ಪಳ | ಸುರಕ್ಷತೆಯೇ ರೈಲ್ವೆ ಸೇವೆಯ ಮೂಲ ಆಧಾರ: ಪ್ರೇಮ್ ಚಂದ್ರ ಹರಿಜನ್

ಕೊಪ್ಪಳ: ಸುರಕ್ಷತೆಯೇ ರೈಲ್ವೆ ಸೇವೆಯ ಮೂಲ ಆಧಾರವಾಗಿದ್ದು, ಅದು ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದು ನೈಋತ್ಯ ರೈಲ್ವೆ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕರಾದ ಪ್ರೇಮ್ ಚಂದ್ರ ಹರಿಜನ್ ಅವರು ಹೇಳಿದರು.
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ ಇಂದು ಆಯೋಜಿಸಿದ್ದ ಸುರಕ್ಷತಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ತವ್ಯ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸಿಬ್ಬಂದಿಗಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಶಿಸ್ತು, ನಿಷ್ಠೆ ಮತ್ತು ಬದ್ಧತೆಯಿಂದ ಕೆಲಸ ಮಾಡಿ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ರೈಲ್ವೆ ಸಿಬ್ಬಂದಿಗಳಿಗೆ ಸಲಹೆಯನ್ನು ನೀಡಿದರು.
ಇಂದು ಪ್ರಶಸ್ತಿ ಪಡೆಯುತ್ತಿರುವವರು ತಮ್ಮ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ರೈಲ್ವೆಗೆ ಮಾದರಿಯಾಗಿದ್ದಾರೆ. ಇಂತಹ ಸಾಧನೆಗಳು ಇತರರಿಗೂ ಕೂಡ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಖೆಗಳಿಗೆ ಸೇರಿದ ಒಟ್ಟು 59 ರೈಲ್ವೆ ಸಿಬ್ಬಂದಿಗೆ, ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ಸುರಕ್ಷತಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ.ಆರ್ ಹಾಗೂ ಇತರ ಶಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.







