ಕೊಪ್ಪಳ | ಶೇಖರಗೌಡ ಮಾಲಿ ಪಾಟೀಲ್ ಗೆ ʼʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಶೇಖರಗೌಡ ಮಾಲಿ ಪಾಟೀಲ್
ಕೊಪ್ಪಳ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಶೇಖರಗೌಡ ಮಾಲಿ ಪಾಟೀಲ್ ಅವರು "ಸಹಕಾರ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಕೃಷಿ ಕುಟುಂಬದ ವಿರುಪಾಕ್ಷಗೌಡ ಮಾಲಿಪಾಟೀಲ್ ಅವರ ಪುತ್ರನಾಗಿರುವ ಡಾ.ಶೇಖರಗೌಡ ಮಾಲಿಪಾಟೀಲ್ ಅವರು ಬಿಎ ವರೆಗೆ ವಿದ್ಯಾರ್ಹತೆ ಪೂರೈಸಿದ್ಧಾರೆ. ಕಾಲೇಜು ಜೀವನದಲ್ಲಿಯೇ ಹೋರಾಟ ಹಾಗೂ ಸಾಮಾಜಿಕ ಅಭಿವೃದ್ಧಿಯ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿದ್ದಾರೆ.
ತಮ್ಮ ಊರಿನಲ್ಲಿ ಉದಯ ಯುವಕ ಮಂಡಳಿಯನ್ನು ಸ್ಥಾಪಿಸಿ ಅದರ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಾ ಬಂದವರು.
ಶೇಖರಗೌಡ ಗುಮಗೇರಾ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನಿರ್ದೆಶಕರಾಗಿ ಆಯ್ಕೆಯಾದ ನಂತರ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಸಹಕಾರ ಯೂನಿಯನ್ಗೆ ಆಯ್ಕೆಯಾಗಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿಯೂ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುತ್ತ ಜಿಲ್ಲೆಯ ಸಹಕಾರ ಕ್ಷೇತ್ರವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಆಯ್ಕೆಯಾಗಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೆಶಕರಾಗಿ, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೆಶಕರಾಗಿ, ಪೀಕಾರ್ಡ್ ಬ್ಯಾಂಕ್ ನಿರ್ದೆಶಕರಾಗಿ, ಹೇಮರೆಡ್ಡಿ ಮಲ್ಲಮ್ಮ ಸಹಕಾರ ಸಂಘದ ನಿರ್ದೆಶಕರಾಗಿ, ಟಿ.ಎ.ಪಿ.ಸಿ.ಎಮ್.ಎಸ್ ಕುಷ್ಟಗಿ ಅಧ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ.
ಶೇಖರಗೌಡರಿಗೆ ದೊರೆತ ಪ್ರಶಸ್ತಿಗಳು :
1989ರಲ್ಲಿ “ಜಿಲ್ಲಾ ಯುವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರ್ಕಾರದಿಂದ “ರಾಜ್ಯ ಯುವ ಪ್ರಶಸ್ತಿ", 1998ರಲ್ಲಿ “ಮಯೂರ ಪ್ರಶಸ್ತಿ", 2004ರಲ್ಲಿ ಕರ್ನಾಟಕ ರಾಜ್ಯ ಸರಕಾರ ಯುವಜನ ಸೇವಾ ಇಲಾಖೆಯಿಂದ ನೀಡಿರುವ “ಕರ್ನಾಟಕ ರಾಜ್ಯ ಯುವ ಪ್ರಶಸ್ತಿ", 2006ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ “ಕನ್ನಡ ಶ್ರೀ ಪ್ರಶಸ್ತಿ”, 2008ರಲ್ಲಿ “ಬಸವ ಜ್ಯೋತಿ ಪ್ರಶಸ್ತಿ” 2012ರಲ್ಲಿ “ರಾಜ್ಯ ಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ”, 2013ರಲ್ಲಿ ಕರ್ನಾಟಕ ಸರ್ಕಾರದಿಂದ “ಸಹಕಾರ ರತ್ನ ಪ್ರಶಸ್ತಿ”, 2016ರಲ್ಲಿ ವಿಜಯ ಟೈಮ್ಸ್ ಮತ್ತು ವಿಜಯ ಕರ್ನಾಟಕದವರು ನೀಡಿರುವ “ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ”, 2023ರಲ್ಲಿ ಶ್ರೀ ಶ್ರೀಶೈಲ ಪೀಠದವರು ನೀಡಿರುವ “ಸಮನ್ವಯಸಿರಿ ಪ್ರಶಸ್ತಿ”, 2025ರಲ್ಲಿ ಶ್ರೀ ಆದನಗೌಡ ಸ್ಮಾರಕ ವಿದ್ಯಾಸಂಸ್ಥೆ ನವಲಹಳ್ಳಿ ಇವರಿಂದ “ಸಹಕಾರ ಭೀಷ್ಮ ಪ್ರಶಸ್ತಿ” ದೊರೆತಿದೆ.







