ಕೊಪ್ಪಳ | ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಪೊಲೀಸ್ ಇಲಾಖೆ, ಮಕ್ಕಳ ಹಕ್ಕು ಆಯೋಗದ ವತಿಯಿಂದ ತನಿಖೆ ನಡೆಯುತ್ತಿದೆ: ಶ್ರೀಶೈಲ್ ಬಿರಾದಾರ್

ಕೊಪ್ಪಳ : ಎಸ್‌ಎಫ್‌ಎಸ್ ಶಾಲೆಯ ವಿದ್ಯಾರ್ಥಿನಿ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಹಕ್ಕು ಆಯೋಗದ ವತಿಯಿಂದ ತನಿಖೆ ನಡೆಯುತ್ತಿದೆಎಂದು ಶ್ರೀಶೈಲ್ ಬಿರಾದರ್ ರವರು ಹೇಳಿದರು.
ಮಂಗಳವಾರ ಕೊಪ್ಪಳ ಪಟ್ಟಣದ ಮಂಗಳಾಪುರ ರಸ್ತೆಯ ಎಕ್ಸಲೆಂಟ್ ಪಬ್ಲಿಕ್ ಶಾಲೆಯ ಬಳಿ ಕೊಪ್ಪಳ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ್ ಬಿರಾದರ್ ರವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಕಲು ಮುಕ್ತ ಪರೀಕ್ಷೆ ನಡೆಯಬೇಕು ಎಂಬುದು ಇಲಾಖೆಯ ಉದ್ದೇಶವಷ್ಟೇ. ಆದರೆ, ಎಸ್.ಎಫ್.ಎಸ್ ಶಾಲೆಯಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿನಿ ನಕಲು ಕಾಫಿ ಚೀಟಿ ಬರೆಯುವಾಗ ಶಿಕ್ಷಕರು ನೋಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿನಿಗೆ ಸೂಕ್ಷ್ಮವಾಗಿ ಹೇಳಬೇಕಾಗಿತ್ತು. ಶಿಕ್ಷಕರ ಮಾತಿನಿಂದ ವಿದ್ಯಾರ್ಥಿನಿಗೆ ನೋವಾಗಿರುವುದು ಕಂಡು ಬಂದಿದೆ. ಸಣ್ಣ ಮಕ್ಕಳು ತಪ್ಪು ಮಾಡುವುದು ಸಹಜ, ಆದರೆ ಇದನ್ನೇ ದೊಡ್ಡದು ಮಾಡಿರುವುದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿರಬಹುದು ಎಂದು ತಿಳಿಸಿದರು.
ಸದ್ಯ ಪೊಲೀಸ್ ಇಲಾಖೆ ಹಾಗೂ ಮಕ್ಕಳ ಹಕ್ಕು ಆಯೋಗದ ವತಿಯಿಂದ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯ ಹೊರಬಂದ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ :
ನಗರದ ಪ್ರತಿಷ್ಠಿತ ಎಸ್‌ಎಫ್‌ಎಸ್ ಎಂಬ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ನಿರೀಕ್ಷಾ ಎಂಬ ಯುವತಿ ಪರೀಕ್ಷೆ ಬರೆಯುವಾಗ ನಕಲು ಮಾಡಿದ್ದಾಳೆ ಎಂದು ಆರೋಪಿಸಿ ಶಿಕ್ಷಕರು ವಿದ್ಯಾರ್ಥಿನಿಗೆ ನಿಂದಿಸಿದ್ದರು. ಇದರಿಂದ ತನ್ನ ಮಾನಸಿಕ ಸ್ಥೈರ್ಯ ಕಳೆದುಕೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.