ಕೊಪ್ಪಳ | ಸಿಂಗನಾಳ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಕಳ್ಳತನ

ಕೊಪ್ಪಳ/ ಕಾರಟಗಿ : ತಾಲೂಕಿನ ಸಿಂಗನಾಳ ಗ್ರಾಮದ ಕರಿಯಮ್ಮ ದೇವಿಯ ದೇವಸ್ಥಾನದಲ್ಲಿ ಜು.22ರ ಮಂಗಳವಾರ ಮಧ್ಯರಾತ್ರಿಯ ವೇಳೆ ಕಳ್ಳರು ಬೆಳ್ಳಿ, ಬಂಗಾರದ ಆಭರಣಗಳು ಮತ್ತು ಮೂರು ಲಕ್ಷಕ್ಕೂ ಅಧಿಕ ಹುಂಡಿಯ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಗರ್ಭಗುಡಿಯ ಮುಂಭಾಗದಲ್ಲಿ ಇರಿಸಲಾಗಿದ್ದ ಲಾಕರ್ ರೂಪದ ಹುಂಡಿಯಲ್ಲಿ ಎರಡು ಮೂರು ವರ್ಷಗಳಿಂದ ಭಕ್ತರು ಸಲ್ಲಿಸಿದ್ದ ಮೂರು ಲಕ್ಷಕ್ಕೂ ಅಧಿಕ ಹಣ ಹಾಗೂ ಅದೇ ಲಾಕರ್'ನಲ್ಲಿ ಇರಿಸಲಾಗಿದ್ದ 75 ಗ್ರಾಂ ದೇವಿಯ ಬಂಗಾರದ ಆಭರಣ ಹಾಗೂ 280ಗ್ರಾಂ ಬೆಳ್ಳಿಯ ಆಭರಣವನ್ನು ಕಳ್ಳರು ಹುಂಡಿಯ ಸಮೇತ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮರುದಿನ ಪೂಜೆ ಸಲ್ಲಿಸಲು ಬಂದಿದ್ದ ಪೂಜಾರಿಯವರು ಹುಂಡಿ ಕಳ್ಳತನವಾಗಿರುವುದನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ನಂತರ ಗ್ರಾಮಸ್ಥರು ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುತ್ತಿದ್ದಂತೆ ಶ್ವಾನದಳದ ಮೂಲಕ ಪೊಲೀಸರು ಆಗಮಿಸಿ ಶೋಧನಾ ಕಾರ್ಯ ಆರಂಭಿಸಿದ್ದಾರೆ.
ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು, ಕೂಡಲೇ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







