ಕೊಪ್ಪಳ | ಜ.29 ರಿಂದ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ : ಶರಣು ಪಾಟೀಲ್

ಕೊಪ್ಪಳ : ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ವತಿಯಿಂದ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ–2026ನ್ನು ಜ.29ರಿಂದ ಫೆ.1ರ, 2026ರವರೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನ ವೈಟ್ ಪೆಟಲ್ಸ್‌ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಐಎಲ್ ವೈಎಫ್ ಹುಬ್ಬಳ್ಳಿ ಚಾಪ್ಟರ್ ಕಾರ್ಯದರ್ಶಿ ಶರಣು ಪಾಟೀಲ್ ತಿಳಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಆವೃತ್ತಿಗಳ ಭಾರೀ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ 75 ಸಾವಿರಕ್ಕೂ ಅಧಿಕ ಜನರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಇದು ಪ್ರದೇಶದ ಅತಿದೊಡ್ಡ ಸಮುದಾಯಾಧಾರಿತ ಉದ್ಯಮ ಸಮ್ಮೇಳನಗಳಲ್ಲಿ ಒಂದಾಗಲಿದೆ ಎಂದರು.
ಜನವರಿ 29ರಂದು ಸಂಜೆ 4:30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಲಿದ್ದಾರೆ.
ಇದಲ್ಲದೆ, ವಿಆರ್‌ಎಲ್ ಗುಂಪಿನ ಸಿಎಂಡಿ ವಿಜಯ ಸಂಕೇಶ್ವರ, ಆದರ್ಶ ಡೆವಲಪರ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ಜಯಶಂಕರ, ಸ್ಪರ್ಶ್ ಆಸ್ಪತ್ರೆಗಳ ಗುಂಪಿನ ಅಧ್ಯಕ್ಷ ಡಾ. ಶರಣ್ ಪಾಟೀಲ್, FII–TMA ಅಧ್ಯಕ್ಷ ಭಾಲಚಂದ್ರ ಸಿಂಗ್ ರಾವ್ ರಾಣೆ, CII ಪ್ರತಿನಿಧಿ ರಬೀಂದ್ರನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಫೆ.1, 2026ರಂದು ಸಂಜೆ 4:30ಕ್ಕೆ ನಡೆಯುವ ಸಮಾರೋಪ ಸಮಾರಂಭವು ಚಿಕ್ಕಮಗಳೂರಿನ ಬಸವತತ್ವ ಪೀಠದ ಪರಮಪೂಜ್ಯ ಡಾ. ಶ್ರೀ ಬಸವ ಮಾರುಳಸಿದ್ದ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಕೆವಿಎಲ್‌ಡಿಸಿಎಲ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ನಿವೃತ್ತ ಅಧಿಕಾರಿ ಶಂಕರ ಬಿದರಿ, ಮುರಗೇಶ್ ನಿರಾಣಿ, ಬಸವೇಶ್ವರ ಹೌಸಿಂಗ್ LLP ನ ನವೀನ್, ರಾಣಿ ಸತೀಶ್, iLYF ಸಂಸ್ಥಾಪಕ ಟ್ರಸ್ಟಿ ಹಾಗೂ ವಿಧಾನಪರಿಷತ್ ಸದಸ್ಯ ನವೀನ್ ಕೆ.ಎಸ್. ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶರಣು ಪಾಟೀಲ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಐಎಲ್ ವೈಎಫ್ ಹುಬ್ಬಳ್ಳಿ ಚಾಪ್ಟರ್ ಸದಸ್ಯರಾದ ಚಿದಾನಂದ ಮುದ್ದುಕವಿ, ಅಭಿಷೇಕ್ ಅಗಡಿ, ಗುರುರಾಜ ಹಲಗೇರಿ ಉಪಸ್ಥಿತರಿದ್ದರು.







