ದಸರಾ ಸಿಎಂ ಕಪ್‌ನಲ್ಲಿ ಕೊಪ್ಪಳದ ಮಹಿಳಾ, ಪುರುಷರ ನೆಟ್‌ಬಾಲ್ ತಂಡಗಳಿಗೆ ಪ್ರಥಮ ಸ್ಥಾನ : ರಾಜ್ಯಮಟ್ಟಕ್ಕೆ ಆಯ್ಕೆ

ಕೊಪ್ಪಳ: ವಿಭಾಗಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಮಹಿಳಾ ಮತ್ತು ಪುರುಷರ ತಂಡಗಳು ಪ್ರಥಮ ಸ್ಥಾನ ಪಡೆದು, ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೆಟ್‌ಬಾಲ್‌ನ ಪುರುಷರ ಹಾಗೂ ಮಹಿಳೆಯರ ಅಂತಿಮ ಪಂದ್ಯಗಳಲ್ಲಿ ವಿಜಯನಗರ ಜಿಲ್ಲಾ ತಂಡಗಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಕೊಪ್ಪಳ ತಂಡಗಳು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದವು.
ಪುರುಷರ ತಂಡವು ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್‌ನ ಅಬ್ದುಲ್ ರಜಾಕ್ ಟೇಲರ್ ಅವರ ನಾಯಕತ್ವದಲ್ಲಿ ಮಂಜುನಾಥ ಜಿ. ಗೊಂಡಬಾಳ, ಶಿವಕುಮಾರ ಹಟ್ಟಿ, ಮಂಜುನಾಥ ಚೌಡಕಿ (ಕುಷ್ಟಗಿ), ಬಾಲಕೃಷ್ಣ ಹಲಗೇಕರ್, ಆಂಜನೇಯ, ಅಬುಬಕರ್, ಭೀಮೇಶ ಕುಡಗುಂಟಿ, ಮಹ್ಮದ್ ಆಫಾನ್ ಮೊಗಲ್, ಆದಿತ್ಯ ಬಡೆಘರ್, ಶಿವರಾಜ ಭೋವಿ ಹಾಗೂ ಅರ್ಹಾನ್ ಅವರನ್ನು ಒಳಗೊಂಡಿತ್ತು.
ಮಹಿಳೆಯರ ನೆಟ್‌ಬಾಲ್ ಅಂಡರ್-19 ನ್ಯಾಷನಲ್ ಗೋಲ್ಡ್ ಮೆಡಲಿಸ್ಟ್ ಸಾಹಿತ್ಯ ಎಂ. ಗೊಂಡಬಾಳ ಅವರ ನಾಯಕತ್ವದಲ್ಲಿ ಅದಿತಿ ನಾಡಗೌಡ, ಸೃಷ್ಟಿ ಗುದ್ಯಾಪಗೋಳ, ಸೋನಾಕ್ಷಿ ಅಳ್ಳೊಳ್ಕರ್, ಅಕ್ಷರ ಎಂ. ಗೊಂಡಬಾಳ, ರಿತುಶ್ರೀ ಮೋತರ್, ಸಿಮ್ರಾ ಮುಲ್ಲಾ, ಗೌರಿ ಸಟ್ಟೆಗೆರಿ, ಸೀತಾ ಗೌರವ, ಶಮಾ ಬಿಸರಳ್ಳಿ, ಆಸ್ಫಿಯಾ ಬಡೇಘರ್ ಹಾಗೂ ಆದಿತಿ ಗವಡೆ ತಂಡದಲ್ಲಿದ್ದರು.
ವಿಜೇತ ತಂಡಗಳಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್, ಮೈ ಭಾರತ್ ಯುವ ಸಮನ್ವಯಾಧಿಕಾರಿ ಮೇಘ್ನಾ, ಕ್ರೀಡಾ ಇಲಾಖೆಯ ಖೋ-ಖೋ ಕೋಚ್ ಯತಿರಾಜ ಹಾಗೂ ಇಲಾಖೆಯ ಹನುಮೇಶ ಅವರು ಬಹುಮಾನ ವಿತರಿಸಿದರು.
ವಿಭಾಗಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ಎರಡೂ ತಂಡಗಳು ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಸಂಸದರು, ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶುಭಹಾರೈಸಿದ್ದಾರೆ.






