ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಡಯಾಲಿಸಿಸ್ ಘಟಕ ಉದ್ಘಾಟನೆ

ಕುಕನೂರು, ಜ.25: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಅಳವಡಿಸಲಾದ ಉಚಿತ ಡಯಾಲಿಸಿಸ್ ಕೇಂದ್ರವನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಭಾನುವಾರ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಿಸ್ ಚಿಕಿತ್ಸೆಗೆ ದೂರದ ಊರುಗಳಿಗೆ ತೆರಳಬೇಕಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 42 ಕೋಟಿ ರೂ. ವೆಚ್ಚದಲ್ಲಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಳವಡಿಸಲಾಗಿದ್ದು, ರೋಗಿಗಳು ಸ್ಥಳದಲ್ಲೇ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ದೊರೆತಿದೆ. ಅಗತ್ಯವಿರುವವರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆಗಳು ಸಹಜವಾಗಿದ್ದರೂ ವೈದ್ಯಾಧಿಕಾರಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ಇಲಾಖೆಯ ಯೋಜನೆಗಳು ಜನರಿಗೆ ತಲುಪಲು ಸಾಧ್ಯ. ಗ್ರಾಮೀಣ ಜನತೆಯ ಸೇವೆಗೆ ವೈದ್ಯರು ಹೆಚ್ಚಿನ ಗಮನ ನೀಡಬೇಕು ಎಂದು ಅವರು ಹೇಳಿದರು.
ಪಟ್ಟಣಕ್ಕೆ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಮಂಜೂರಾಗಿದ್ದು, ಇದಕ್ಕಾಗಿ 42 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಂಬಂಧಪಟ್ಟ ಸಮಿತಿಯ ಶಿಫಾರಸ್ಸಿನ ಮೇರೆಗೆ ಜಮೀನು ಗುರುತಿಸಿ ಏಪ್ರಿಲ್ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಉಪಕರಣಗಳು ಹಾಗೂ ನುರಿತ ಸಿಬ್ಬಂದಿಯೊಂದಿಗೆ ಆಸ್ಪತ್ರೆ ಶೀಘ್ರದಲ್ಲೇ ಜನಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಕುಕನೂರು ಭಾಗದಲ್ಲಿ ತಾಲೂಕು ಆಡಳಿತ ಸೌಧದ ಅಗತ್ಯವಿದ್ದು, ಇದಕ್ಕೆ ಅಡ್ಡಿಯಾಗಿದ್ದ ಕಾನೂನು ತೊಡಕುಗಳು ಶೀಘ್ರದಲ್ಲೇ ನಿವಾರಣೆಯಾಗಲಿವೆ. ಮುಂದಿನ ಮೂರು ತಿಂಗಳೊಳಗೆ ತಾಲೂಕು ಆಡಳಿತ ಸೌಧ ಹಾಗೂ ತಾಲೂಕು ಕ್ರೀಡಾಂಗಣದ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಹಿಂದಿನ ಸರ್ಕಾರ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದರೂ ಹಣ ಬಿಡುಗಡೆ ಮಾಡದೇ ಇರುವುದು ಹಾಗೂ 7ನೇ ವೇತನ ಆಯೋಗದ ಜಾರಿಯಲ್ಲಿ ವಿಳಂಬವಾದುದು ಹೊಸ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗಿತ್ತು. ಆದರೂ ಪ್ರಸ್ತುತ ಸರ್ಕಾರ ಬಾಕಿ ಉಳಿದಿದ್ದ 12 ಸಾವಿರ ಕೋಟಿ ರೂ.ಗಳಲ್ಲಿ 6 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯಲಿವೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರೆಡ್ಡಿ ಮಾತನಾಡಿ, ಸೋಮವಾರದಿಂದ ಎರಡು ಡಯಾಲಿಸಿಸ್ ಯಂತ್ರಗಳು ಕಾರ್ಯಾರಂಭ ಮಾಡಲಿದ್ದು, ಈಗಾಗಲೇ ತಾಲೂಕಿನಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಆರು ಜನರನ್ನು ಗುರುತಿಸಲಾಗಿದೆ. ಪ್ರತಿದಿನ ಆರು ಜನರಿಗೆ ಉಚಿತ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುವುದು. ಅಗತ್ಯ ತಂತ್ರಜ್ಞರು, ನರ್ಸ್‌ಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ ಸೌಲಭ್ಯ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾ.ಪಂ.ಇ.ಓ ಸಂತೋಷ್ ಬಿರಾದರ ಪಾಟೀಲ, ಪ್ರಮುಖರಾದ ಎಂಕಣ್ಣ ಯರಾಶಿ, ಕಾಸಿಂಸಾಬ್ ತಳಕಲ್, ಹನುಮಂತಗೌಡ ಚಂಡೂರ, ಕರಿಬಸಪ್ಪ ನಿಡಗುಂದಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಹಂಪಯ್ಯ ಹಿರೇಮಠ, ಸಂಗಮೇಶ ಗುತ್ತಿ, ವೈದ್ಯರಾದ ಡಾ. ಶಿವನಗೌಡ ದಾನರೆಡ್ಡಿ, ಡಾ. ಪ್ರಿಯಾಂಕಾ ಕಂಪ್ಲಿ, ಡಾ. ಮಮತಾ ಇಲಕಲ್, ಡಾ. ಮಂಜುನಾಥ ಹೊಕಳದ್, ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







