ಕುಕನೂರಿನಲ್ಲಿ ಗೃಹ ರಕ್ಷಕ ದಳದ 25ನೇ ವರ್ಷದ ರಜತ ಮಹೋತ್ಸವ ಆಚರಣೆ

ಕುಕನೂರು: ಕರ್ನಾಟಕ ರಾಜ್ಯ ಗೃಹ ರಕ್ಷಕ ದಳದ 63ನೇ ವರ್ಷದ ದಿನಾಚರಣೆಯ ಅಂಗವಾಗಿ ಗೃಹ ರಕ್ಷಕ ದಳ ಕುಕನೂರು ಘಟಕದ 25ನೇ ವರ್ಷದ ರಜತ ಮಹೋತ್ಸವವನ್ನು ಶುಕ್ರವಾರ ಪಟ್ಟಣದ ವಿದ್ಯಾನಂದ ಗುರುಕುಲದ ಹುತಾತ್ಮ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಕೊಪ್ಪಳ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಸೋಮಣ್ಣಗೌಡ ಎಂ.ಪಾಟೀಲ್, ಗೃಹ ರಕ್ಷಕರು ಪೊಲೀಸ್ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಚುನಾವಣಾ ಕರ್ತವ್ಯ, ವಿಪತ್ತು ನಿರ್ವಹಣೆ, ಸಂಚಾರ ನಿಯಂತ್ರಣ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಡಿಮೆ ವೇತನ, ಅನಿಶ್ಚಿತ ಸೇವಾ ಭದ್ರತೆ ಹಾಗೂ ಸೌಲಭ್ಯಗಳ ಕೊರತೆಯ ನಡುವೆಯೂ ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಪ್ರಸ್ತುತ ಕುಕನೂರು ಘಟಕದಲ್ಲಿ ಸುಮಾರು 150 ಗೃಹ ರಕ್ಷಕರು ಸೇವೆ ಸಲ್ಲಿಸುತ್ತಿದ್ದು, ಈ ಸಂಸ್ಥೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿಸುವ ಮಹತ್ವದ ವೇದಿಕೆಯಾಗಿದೆ. ಅನೇಕ ಗೃಹ ರಕ್ಷಕರು ತಮ್ಮ ಕುಟುಂಬದ ಆರ್ಥಿಕ ಜವಾಬ್ದಾರಿಗಳ ನಡುವೆಯೂ ಸಾರ್ವಜನಿಕ ಸೇವೆಗೆ ಸದಾ ಸಿದ್ಧರಾಗಿದ್ದು, ಅವರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಸಮಾಜ ಹೆಚ್ಚು ಸ್ಪಂದಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಹೇಮಂತ್ ಕುಮಾರ್, ಕೊಪ್ಪಳ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಕೆ. ಲಕ್ಷ್ಮಣ್ ಕಡೆಮನಿ, ವಿದ್ಯಾನಂದ ಗುರುಕುಲ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ಜಾಗೀರ್ದಾರ್, ಡಾ. ಜಿ.ಎಸ್.ಎಂ.ಆರ್ ಪಾಲಿಟೆಕ್ ಕಾಲೇಜಿನ ಪ್ರಾಚಾರ್ಯ ಅಮರೇಶ್ ಮಡ್ದೆಕರ್, ಪಟ್ಟಣ ಪಂಚಾಯತಿ ಸದಸ್ಯ ಗಗನ್ ನೋಟ್ಗಾರ್, ವೈದ್ಯಾಧಿಕಾರಿ ಡಾ. ಶಿವಕುಮಾರ್ ಕಂಬಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಕುಕನೂರು ಗೃಹ ರಕ್ಷಕ ದಳದ ಘಟಕಾಧಿಕಾರಿ ಬಾಳಪ್ಪ ಕೆ. ಯತ್ನಟ್ಟಿ, ಪ್ಲಟೂನ್ ಕಮಾಂಡರ್ ಅಮರೇಶ್ ಕೊಪ್ಪದ್, ಕೊಪ್ಪಳ ದಳದ ಮಹಿಳಾ ಘಟಕಾಧಿಕಾರಿ ಗವಿಸಿದ್ದಮ್ಮ, ಜಿಲ್ಲಾ ವರದಿಗಾರ್ತಿ ಸರಸ್ವತಿ ನಾಗರಾಜ್ (ಗಂಗಾವತಿ), ಸ್ಥಳೀಯ ಜೆಸ್ಕಾಂ ಶಾಖಾಧಿಕಾರಿ ವೀರೇಶ್ ಕೆ. ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಗೃಹ ರಕ್ಷಕ ದಳದ ಘಟಕಾಧಿಕಾರಿಗಳು, ಪ್ಲಟೂನ್ ಕಮಾಂಡರ್‌ಗಳು, ಸೀನಿಯರ್ ಪ್ಲಟೂನ್ ಹಾಗೂ ಕಂಪನಿ ಕಮಾಂಡರ್‌ಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.







