ಕುಕನೂರು | ಕಲಿಕಾ ಹಬ್ಬ ಕಾರ್ಯಕ್ರಮದ ಸದ್ಬಳಕೆಗೆ ಸಹಕರಿಸಿ : ಮಹೇಶ್ ಸಬರದ

ಕುಕನೂರು : ಸರ್ಕಾರ ಹಮ್ಮಿಕೊಂಡಿರುವ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕೆಂದು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಸಬರದ ಹೇಳಿದರು.
ಪಟ್ಟಣದ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ 2025–26ನೇ ಸಾಲಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಶಿಕ್ಷಣ ಇಲಾಖೆ ಹಾಗೂ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಅಭಿವೃದ್ಧಿಗೆ ಶೈಕ್ಷಣಿಕ ಅಭಿವೃದ್ಧಿ ಪೂರಕವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಕಲಿಕಾ ಹಬ್ಬ ಅತ್ಯಂತ ಪ್ರೇರಣಾದಾಯಕ ಕಾರ್ಯಕ್ರಮವಾಗಿದ್ದು, ಶಿಕ್ಷಕರು ಹಾಗೂ ಪಾಲಕರು ಇದರ ಸದ್ಬಳಕೆಗೆ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಗಳ ನೌಕರ ಸಂಘದ ತಾಲೂಕು ಅಧ್ಯಕ್ಷ ಮಾರುತೇಶ್ ತಳವಾರ ಮಾತನಾಡಿ, ಕಲಿಕಾ ಹಬ್ಬದಲ್ಲಿ ಕನ್ನಡ ಮತ್ತು ಗಣಿತ ವಿಷಯಗಳಿಗೆ ಒತ್ತು ನೀಡಲಾಗಿದ್ದು, 17 ಕಲಿಕಾ ಫಲಗಳನ್ನು ಒಳಗೊಂಡಿದೆ. ಹಿಂದುಳಿದ ಮಕ್ಕಳನ್ನು ಪ್ರೇರೇಪಿಸುವುದು. ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಶಿಕ್ಷಕರು ಹಾಗೂ ಪಾಲಕರು ಮಕ್ಕಳೊಂದಿಗೆ ರಸಮಂಜರಿ ಮತ್ತು ಚಟುವಟಿಕೆಗಳ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಚುಸಾಪ ಅಧ್ಯಕ್ಷ ರುದ್ರಪ್ಪ ಬಂಡಾರಿ, ಸಿಆರ್‌ಪಿ ಪಿರಸಾಬ್ ದಫೇದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಮರ್ಧಾನ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಾರ್ವತಿ ಅನಸಿ, ಸಹಶಿಕ್ಷಕಿಯರಾದ ಶಾಂತಾ ಹಿರೇಮಠ, ಗಿರಿಜಾ, ಮೆಹಬೂಬ್ ಗುಡಿಹಿಂದಲ, ಮುಖ್ಯಶಿಕ್ಷಕ ಶರಣಪ್ಪ ರಾವಣಕಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಈ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.







