ಕುಕನೂರು | ಶಿಕ್ಷಕ ವೀರನಗೌಡ ಪಾಟೀಲರಿಗೆ ವಯೋನಿವೃತ್ತಿ ಬೀಳ್ಕೊಡುಗೆ

ಕುಕನೂರು : ಸರ್ಕಾರಿ ಹುದ್ದೆಯಲ್ಲಿ ವಯೋನಿವೃತ್ತಿಯಾಗುವುದು ಸಹಜವಾದರೂ, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಆತ್ಮೀಯತೆ ಗಳಿಸಿದ ವೀರನಗೌಡ ಪಾಟೀಲರು ಇತರರಿಗೆ ಮಾದರಿಯಾಗಿದ್ದಾರೆ ಎಂದು ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾರುತಿ ತಳವಾರ ಹೇಳಿದರು.
ಪಟ್ಟಣದ ಕೋಳಿಪೇಟೆಯಲ್ಲಿರುವ ಸರ್ಕಾರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಮಾಧ್ಯಮಿಕ ಶಾಲೆಯಲ್ಲಿ ಆಯೋಜಿಸಿದ್ದ ವೀರನಗೌಡ ಪಾಟೀಲರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀರನಗೌಡ ಪಾಟೀಲರು ತಮ್ಮ ಸೇವಾ ಅವಧಿಯಲ್ಲಿ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಿ ಸುಮಾರು 31 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಶಿಕ್ಷಕ ಮಹೇಶ ಬೆದವಟ್ಟಿ ಮಾತನಾಡಿ, ವೀರನಗೌಡ ಪಾಟೀಲರು ಇಲಾಖೆಗೆ ಸಲ್ಲಿಸಿದ ಸೇವೆ ಅನನ್ಯ. ಅನುಭವಿ ಶಿಕ್ಷಕರನ್ನು ಕಳೆದುಕೊಳ್ಳುವುದು ದುಃಖಕರವಾದರೂ, ಕುಟುಂಬದವರೊಂದಿಗೆ ಅವರು ಸಂತೋಷದ ನಿವೃತ್ತಿ ಜೀವನ ನಡೆಸಲಿ ಎಂದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಖಜಾಂಚಿ ಬಸವರಾಜ್ ಬೆಲ್ಲದ್, ಗುಡುಸಾಬ ಮಕಾಂದರ್, ಅಬ್ದುಲ್ ದೇವದುರ್ಗ, ಸಂಗಪ್ಪ ರಾಜೂರ, ಹುಲಿಗೆಮ್ಮ ವಜ್ರಬಂಡಿ, ಶಿವಕುಮಾರ್ ಮುತ್ತಾಳ, ವೀರಣ್ಣ ಕೋನಾರಿ, ಶಂಭುಲಿಂಗಪ್ಪ ಅರಿಶಿನ, ಮುಖ್ಯ ಶಿಕ್ಷಕಿ ಕೃಷ್ಣವೇಣಿ ದೀಕ್ಷಿತ್, ಇಮಾಮ್ ಕಲ್ಬಂಡಿ, ಶಿಕ್ಷಕಿಯರಾದ ಶಾಂತ ಕಟ್ಟಿ, ರೇಣುಕಾ ಬಡಿಗೇರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







