ಕುಕನೂರು | ಗುದ್ನೇಶ್ವರ ಮಠದ ಜಮೀನು ವಿವಾದ ಪ್ರಕರಣ: ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಕುಕನೂರು : ಪಟ್ಟಣದಲ್ಲಿರುವ ಮುಜರಾಯಿ ಇಲಾಖೆಗೆ ಒಳಪಡುವ ಗುದ್ನೇಶ್ವರ ದೇವಸ್ಥಾನದ ಜಮೀನಿನ ವಿವಾದಿತ ಸ್ಥಳಕ್ಕೆ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಲ್ಯಾಣ ಕಲಬುರಗಿ ವಿಭಾಗೀಯ ಉಪ ಆಯುಕ್ತೆ ಜಹೀರಾ ನಸ್ರಿಮ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಭೇಟಿಯ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಅವರು ಉಪಸ್ಥಿತರಿದ್ದರು.
'ಗುದ್ನೇಶ್ವರ ದೇವಸ್ಥಾನದ ಜಮೀನಿನ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಜಾಗದಲ್ಲಿ ತಾಲೂಕು ಆಡಳಿತ ಕಚೇರಿ, ಬುದ್ಧ ಬಸವ ಅಂಬೇಡ್ಕರ್ ಭವನ ಹಾಗೂ ನ್ಯಾಯಾಲಯ ನಿರ್ಮಾಣಕ್ಕೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗುದ್ನೇಶ್ವರ ಮಠದ ಗ್ರಾಮಸ್ಥರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ಸುಮಾರು ಎರಡುವರೆ ವರ್ಷಗಳಿಂದ ಜಮೀನು ವಿವಾದ ಮುಂದುವರಿದಿರುವ ಹಿನ್ನೆಲೆ ಪ್ರಕರಣ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲೇ ಅಧಿಕಾರಿಗಳ ಭೇಟಿ ಸ್ಥಳೀಯ ವಲಯದಲ್ಲಿ ಗಮನ ಸೆಳೆದಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪ ಆಯುಕ್ತೆ ಜಹೀರಾ ನಸ್ರಿಮ್ ಅವರು, “ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನು ಇರುವ ಹಿನ್ನೆಲೆ ನಿಯಮಿತ ಆಡಳಿತಾತ್ಮಕ ವೀಕ್ಷಣೆ ನಡೆಸಲಾಗಿದೆ,” ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಕುಕನೂರು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ ಬಿರಾದಾರ್ ಪಾಟೀಲ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು






