ಕುಕನೂರು | ಪೊಲೀಸರ ಸಮ್ಮುಖದಲ್ಲಿ ಗುದ್ನೇಶ್ವರ ದೇವಸ್ಥಾನದ ಭೂಮಿ ಸರ್ವೇ

ಕುಕನೂರು : ಪಟ್ಟಣದ ಪ್ರಸಿದ್ದ, ಐತಿಹಾಸಿಕ ದೇವಾಲಯ ಗುದ್ನಶ್ವರ ಮಠದ ಶ್ರೀ ರುದ್ರಮುನೀಶ್ವರ ದೇವಾಲಯದ ಜಮೀನು ಸರ್ವೇ ಕಾರ್ಯವನ್ನು ಜಿಲ್ಲಾ ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ ಅವರ ಸಮ್ಮುಖದಲ್ಲಿ ಸೋಮವಾರ ಮಾಡಲಾಯಿತು.
ಪೊಲೀಸರ ಸಮ್ಮುಖದಲ್ಲಿ ಗುದ್ನೇಶ್ವರ ದೇವಸ್ಥಾನ ಟ್ರಸ್ಟ್ ಗೆ ಸೇರಿದ ಭೂಮಿಯ ಸರ್ವೇ ಕಾರ್ಯವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಂದ ವೀಕ್ಷಣೆ ಜೊತೆಗೆ ಸರ್ವೇ ಕಾರ್ಯ ನಡೆಯಿತು. ಸದರಿ ದೇವಸ್ಥಾನಕ್ಕೆ ಸೇರಿದ ಜಮೀನಿಗೆ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಕೂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪೊಲೀಸ್ ಸರ್ಪ ಗವಾಲಿನಲ್ಲಿ ಸರ್ವೇ ಕಾರ್ಯ ನಡೆಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ.
ದೇವಸ್ಥಾನದ ಜಾಗದಲ್ಲಿ ಸ್ಥಳೀಯ ಆಡಳಿತ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ನೂತನ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಈಗಾಗಲೇ ತಿಕ್ಕಾಟ ನಡೆದು ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ಆದರೂ ಕೂಡ ಅಧಿಕಾರಿಗಳು ಮತ್ತೊಮ್ಮೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು, ದೇವಸ್ಥಾನದ ಭೂಮಿ ಕೈತಪ್ಪುವ ಭೀತಿಯಲ್ಲಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಉಪ ವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ ಅವರು, ದೇವಸ್ಥಾನದ ಕೆಲ ಜಮೀನಿಗೆ ಸಂಬಂದಿಸಿದ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಅದನ್ನು ಪಾಲಿಸುತ್ತೇವೆ ಎಂದಿದ್ದಾರೆ. ಮತ್ತೊಂದು ಕಡೆ ಸರ್ವೇ ಕಾರ್ಯ ಮುಂದುವರೆದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿದೆ.







