ಕುಕನೂರು | ತಡಕಲ್ ಉಪ ಅಂಚೆ ಕಚೇರಿಗೆ ರೂ. 50 ಲಕ್ಷದ ಸ್ವಂತ ಕಟ್ಟಡ

ಕುಕನೂರು: ತಾಲೂಕಿನ ತಡಕಲ್ ಗ್ರಾಮದಲ್ಲಿದ್ದ ಶಾಖಾ ಅಂಚೆ ಕಚೇರಿಯನ್ನು ಉಪ ಅಂಚೆ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ್ ಹೇಳಿದರು.
ತಡಕಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಉಪ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಡಕಲ್ ಸುತ್ತಮುತ್ತಲಿನ ನಾಲ್ಕೈದು ಶಾಖಾ ಅಂಚೆ ಕಚೇರಿಗಳು ಈ ಹಿಂದೆ ಭಾಗ್ಯನಗರದ ಉಪ ಅಂಚೆ ಕಚೇರಿಯನ್ನು ಅವಲಂಬಿಸಿದ್ದವು. ದೂರದ ಕಾರಣ ಸಾರ್ವಜನಿಕರು ಅಂಚೆ ಸೇವೆ ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿ ತಡಕಲ್‌ನಲ್ಲಿ ಉಪ ಅಂಚೆ ಕಚೇರಿ ಆರಂಭಿಸಲಾಗಿದೆ ಎಂದರು.
ಅಂಚೆ ಇಲಾಖೆಯು ಪತ್ರ ವ್ಯವಹಾರದ ಜತೆಗೆ ಬ್ಯಾಂಕಿಂಗ್, ವಿಮೆ, ಉಳಿತಾಯ ಯೋಜನೆಗಳು, ಹಣಕಾಸು ವಹಿವಾಟು, ಆಧಾರ್ ಮತ್ತು ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತಿದೆ. ಸಾರ್ವಜನಿಕರು ಈ ಸೇವೆಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕೊಪ್ಪಳ ಅಂಚೆ ವಿಭಾಗದಲ್ಲಿ 184 ಶಾಖಾ ಅಂಚೆ ಕಚೇರಿಗಳು ಹಾಗೂ 37 ಉಪ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ಅಂಚೆ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಸಿಎಸ್‌ಆರ್ ಹಾಗೂ ಸರ್ಕಾರಿ ಅನುದಾನ ಬಳಸಲಾಗುತ್ತಿದೆ. ತಡಕಲ್‌ನಲ್ಲಿ ಉಪ ಅಂಚೆ ಕಚೇರಿಗೆ ಸೂಕ್ತ ಜಾಗ ದೊರೆತರೆ ₹50 ಲಕ್ಷ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ
ಡಿಜಿಟಲ್ ವಹಿವಾಟಿನ ಸಂದರ್ಭದಲ್ಲಿ ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಪರಿಚಿತರಿಂದ ಬರುವ ಕರೆಗಳಿಗೆ ಪ್ರತಿಕ್ರಿಯಿಸಬಾರದು. ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯಬಾರದು. ಒಟಿಪಿ, ಬ್ಯಾಂಕ್ ಖಾತೆ ಹಾಗೂ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರಿಗೆ ನೀಡಬಾರದು ಎಂದು ಹಿಟ್ನಾಳ್ ಸಲಹೆ ನೀಡಿದರು.
ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾಪ
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಅವರು, ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಸಮೀಕ್ಷೆ ಹಾಗೂ ಡಿಪಿಆರ್ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ ಎಂದರು.
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ದೊರೆಯಲಿದ್ದು, ಇದರಿಂದ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಹೆಚ್ಚಲಿದೆ ಎಂದು ಹೇಳಿದರು.
ಮಳೆ ಕೊರತೆ ಹಾಗೂ ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ರೈತರು ತೋಟಗಾರಿಕೆ ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಇಂತಹ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ರಫ್ತು ಅವಕಾಶಗಳಿವೆ ಎಂದರು.
ಅಂಚೆ ಉಳಿತಾಯ ಯೋಜನೆಗಳ ಮಾಹಿತಿ
ಯುವ ನಾಯಕ ಉದಯ ರಾಯರೆಡ್ಡಿ ಮಾತನಾಡಿ, ಅಂಚೆ ಇಲಾಖೆ ಹಲವು ವರ್ಷಗಳಿಂದ ದೇಶದ ವಿವಿಧ ಭಾಗಗಳ ಜನರನ್ನು ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಪಿಪಿಎಫ್, ಟೈಮ್ ಡೆಪಾಸಿಟ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಕಿಸಾನ್ ವಿಕಾಸ್ ಪತ್ರ ಹಾಗೂ ಸುಕನ್ಯಾ ಸಮೃದ್ಧಿ ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಮುಂಡರಗಿ, ಹುಲಿಗಿ, ಅಲವಂಡಿ, ತಳಕಲ್, ಕುಕನೂರು ಹಾಗೂ ಕಣಗಿಹಾಳದಲ್ಲಿ ಉಪ ಅಂಚೆ ಕಚೇರಿಗಳ ಮಂಜೂರಾತಿಗೆ ಸಂಸದರು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ತಡಕಲ್ ಉಪ ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಸಿಎಸ್‌ಆರ್ ಅಥವಾ ಸಂಸದರ ಅನುದಾನ ಬಳಸುವಂತೆ ಮನವಿ ಮಾಡಿದರು. ಕುಕನೂರು ಅಂಚೆ ಕಚೇರಿಗೆ ಸಂಬಂಧಿಸಿದ ಜಾಗದ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಟ್ಟಡ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕ ನಾಗರಾಜ್ ಪಾಟೀಲ್, ಜಿ.ಎನ್. ಹಳ್ಳಿ, ಪಂಚಾಯತ್ ಆಡಳಿತ ಅಧಿಕಾರಿ ಆನಂದ್ ಕೆರೂರು, ಗ್ರಾ.ಪಂ. ಪಿಡಿಒ ವೀರನಗೌಡ ಚೆನ್ನವಿರಾಗೌಡ, ಯಂಕಣ್ಣ ಯಾರಾಶಿ, ತಿಮ್ಮಣ್ಣ ಚೌಡಕಿ, ಹನಮಂತಗೌಡ ಚೆಂಡೂರು, ಶಿವಕುಮಾರ್ ಆದಾಪುರ, ಮಹಮ್ಮದ್ ಸಿರಾಜ್ವುದ್ದಿನ್, ವೀರೇಶ್ ಬಿಸನಳ್ಳಿ, ಮಲ್ಲಿಕಾರ್ಜುನ ಮೇಟಿ ಸೇರಿದಂತೆ ಅಂಚೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.






