ಕುಕನೂರು | ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ : ನಾಗರಾಜ್ ವೆಂಕಟಾಪುರ ಅಸಮಾಧಾನ

ಕುಕನೂರು : ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ವೆಂಕಟಾಪುರ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಅನುದಾನಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ. ಪರಿಣಾಮವಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ವಸತಿ ಯೋಜನೆಗಳ ಜಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಜನರ ವಿಶ್ವಾಸದ ಮೇಲೆ ಆಯ್ಕೆಯಾದರೂ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬನ್ನಿಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ 144 ನಿವೇಶನಗಳಲ್ಲಿ ಈಗಾಗಲೇ 122 ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಪಂಚಾಯತ್ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ. ಈ ಕುರಿತು ಶಾಸಕರು, ಸಚಿವರು ಹಾಗೂ ಮೇಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಡಿಜಿಟಲೀಕರಣ ಯೋಜನೆಯಡಿ ಬನ್ನಿಕೊಪ್ಪ ಗ್ರಾ.ಪಂ. ಗ್ರಂಥಾಲಯಕ್ಕೆ ನೀಡಬೇಕಾದ 56 ಇಂಚಿನ ಆಂಡ್ರಾಯ್ಡ್ ಎಲ್‌ಇಡಿ ಟಿವಿಯನ್ನು ತಾಲೂಕು ಪಂಚಾಯತ್ ಕಚೇರಿ ಸ್ವೀಕರಿಸಿದ್ದರೂ, ಇದುವರೆಗೆ ಗ್ರಂಥಾಲಯಕ್ಕೆ ಒದಗಿಸಿಲ್ಲ. ಈ ವಿಷಯವಾಗಿ ಪುನಃಪುನಃ ಮನವಿ ಮಾಡಿದರೂ ಅಧಿಕಾರಿಗಳ ಜಾಣ ಕುರುಡುತನದಿಂದ ಅನುಮಾನಗಳು ಮೂಡುತ್ತಿವೆ. ಈ ಕುರಿತು ಮೇಲಾಧಿಕಾರಿಗಳು ಸ್ಪಷ್ಟನೆ ನೀಡಿ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ, ಬನ್ನಿಕೊಪ್ಪ ಗ್ರಾ.ಪಂ. ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಡಿಒ ದೀರ್ಘಕಾಲದಿಂದ ಕರ್ತವ್ಯಕ್ಕೆ ಗೈರಾಗಿರುವುದರಿಂದ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಸಾರ್ವಜನಿಕರಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳು ವಿಳಂಬವಾಗುತ್ತಿದ್ದು, ಈ ವಿಷಯದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೌನವಹಿಸಿರುವುದು ಸರಿಯಲ್ಲ ಎಂದರು.
ಬೂದು ನೀರಿನ ನಿರ್ವಹಣಾ ಘಟಕಕ್ಕೆ 2 ಕೋಟಿ 13 ಲಕ್ಷ 53 ಸಾವಿರ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅನುದಾನಕ್ಕೂ ಅನುಮೋದನೆ ದೊರೆತಿದ್ದರೂ ಪ್ರಕ್ರಿಯಾತ್ಮಕ ಕಾರಣಗಳಿಂದ ಕಾಮಗಾರಿಗೆ ಇನ್ನೂ ಅಂತಿಮ ಅನುಮೋದನೆ ಸಿಕ್ಕಿಲ್ಲ. ಅಲ್ಲದೆ ಗ್ರಾಮದಲ್ಲಿ ಚರಂಡಿ, ವಿದ್ಯುತ್ ಕಂಬ, ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಬಾಕಿಯಿವೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮರಿಗೌಡ ತೆಗ್ಗಿನಮಠ, ಸಿದ್ದಪ್ಪ ಮಾಳಿಕೊಪ್ಪ, ಶಿವಪ್ಪ ಚವಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







