ಕುಕನೂರು | ಮಹಾರ್ ಸೈನಿಕರ ಶೌರ್ಯದ ಸ್ಮರಣಾರ್ಥ ಭೀಮಾ ಕೋರೆಗಾಂವ್ ವಿಜಯೋತ್ಸವ: ಸುರೇಶ ಭೂಮರಡ್ಡಿ

ಕುಕನೂರು, ಜ.1: ಮಹಾರ್ ಸೈನಿಕರ ಶೌರ್ಯ ಮತ್ತು ತ್ಯಾಗದ ಸ್ಮರಣಾರ್ಥವಾಗಿ ಪ್ರತಿವರ್ಷ ಜನವರಿ 1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಸುರೇಶ್ ಭೂಮರಡ್ಡಿ ಹೇಳಿದರು.
ತಾಲ್ಲೂಕಿನ ಶಿರೂರು ಗ್ರಾಮದ ದಿ. ಕೆ. ಎಚ್. ಪಾಟೀಲ ಅವರ ಪುತ್ಥಳಿ ಮುಂಭಾಗದಲ್ಲಿ ಮಾನವ ಬಂಧುತ್ವ ವೇದಿಕೆ ಕುಕನೂರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಯುವಶಕ್ತಿ ಸಂಘ ಶಿರೂರು ವತಿಯಿಂದ ಆಯೋಜಿಸಲಾದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1818ರ ಜನವರಿ 1ರಂದು ಪುಣೆ ಸಮೀಪದ ಭೀಮಾ ನದಿ ದಂಡೆಯ ಕೋರೆಗಾಂವ್ ಬಳಿ ನಡೆದ ಯುದ್ಧದಲ್ಲಿ, ಸುಮಾರು 30 ಸಾವಿರ ಸೈನಿಕರಿದ್ದ ಪೇಶ್ವೆ ಸೇನೆಯ ವಿರುದ್ಧ ಕೇವಲ 500 ಮಹಾರ್ ಯೋಧರು ಅಪಾರ ಶೌರ್ಯದಿಂದ ಹೋರಾಡಿ ವಿಜಯ ಸಾಧಿಸಿದ್ದರು. ಈ ಸಮರದಲ್ಲಿ ಪೇಶ್ವೆ ಬಾಜಿರಾಯ ಸೋಲುಂಡು ಪಲಾಯನಗೈದನು ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್.ಟಿ. ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ. ರತ್ನಾಕರ್ ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧವು ಕೇವಲ ಸೈನಿಕ ವಿಜಯವಲ್ಲ. ಅದು ಶತಮಾನಗಳ ಜಾತಿ ದಮನ, ಅಸ್ಪೃಶ್ಯತೆ ಮತ್ತು ಅವಮಾನಗಳ ವಿರುದ್ಧ ಸಮಾನತೆ ಹಾಗೂ ಸ್ವಾಭಿಮಾನಕ್ಕಾಗಿ ನಡೆದ ಹೋರಾಟವಾಗಿದೆ ಎಂದು ಹೇಳಿದರು.
ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಜಿಲ್ಲಾ ಸಂಚಾಲಕ ಭೀಮಪ್ಪ ಹವಳಿ, ಕವಿ–ಸಾಹಿತಿಗಳಾದ ಶಿವಮೂರ್ತಿ ಇಟಗಿ, ಶೇಖರಡ್ಡಿ ಮಾದಿನೂರು, ಸುರೇಶ್‌ಗೌಡ ಶಿವನಗೌಡ್ರ ಅವರು ಭೀಮಾ ಕೋರೆಗಾಂವ್ ವಿಜಯೋತ್ಸವದ ಐತಿಹಾಸಿಕ ಮಹತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇವಪ್ಪ ಕುಂಬಾರ, ಈಶಪ್ಪ ದೊಡ್ಡಮನಿ, ಬಸವರಾಜ ನಾಯಕ, ವೀರೇಂದ್ರರಡ್ಡಿ, ರಮೇಶ್ ವಾಲ್ಮೀಕಿ, ಈರಪ್ಪ, ಶಂಕ್ರಪ್ಪ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದು, ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.







