Kuknoor | ಫಾರಂ–7 ದುರುಪಯೋಗ ಆರೋಪ: ಸಮಗ್ರ ತನಿಖೆಗೆ ಬ್ಲಾಕ್ ಕಾಂಗ್ರೆಸ್ ಆಗ್ರಹ

ಕುಕನೂರು: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಫಾರಂ–7 ಅರ್ಜಿಗಳನ್ನು ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕುಕನೂರು ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.
ಮಂಗಳವಾರ ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಸಂಗಮೇಶ ಗುತ್ತಿ, ಅರ್ಹ ಮತದಾರರ ಹೆಸರುಗಳನ್ನು ಸುಳ್ಳು ಅಥವಾ ಆಧಾರರಹಿತ ಮಾಹಿತಿಯ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ನಾಚಿಕೆಗೇಡಿನ ಕೆಲಸ. ಇಂತಹ ಅರ್ಜಿಗಳ ಹಿಂದಿರುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕುಕನೂರು ವ್ಯಾಪ್ತಿಯಲ್ಲಿ ಸುಮಾರು 340ರಿಂದ 350 ಮತದಾರರ ವಿರುದ್ಧ 30ರಿಂದ 40 ಮಂದಿ ಫಾರಂ–7 ಅರ್ಜಿಗಳನ್ನು ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅರ್ಜಿಗಳಲ್ಲಿನ ಕಾರಣಗಳು, ದಾಖಲೆಗಳು ಹಾಗೂ ಅರ್ಜಿದಾರರ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅನುಮಾನಾಸ್ಪದ ಅರ್ಜಿಗಳ ಕುರಿತು ತನಿಖೆ ನಡೆಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.
ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಮೊದಲು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ದಾಖಲೆಗಳನ್ನು ಸಲ್ಲಿಸಲು ಹಾಗೂ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸಬೇಕು. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಸ್‌ಐಆರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ವಿಶ್ವನಾಥ ಎಂ.ಎನ್. ಅವರು ಮನವಿ ಸ್ವೀಕರಿಸಿದರು. ಮನವಿಯಲ್ಲಿನ ಅಂಶಗಳನ್ನು ಪರಿಶೀಲಿಸಿ, ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿರಾಜುದ್ದೀನ್ ತಳಕಲ್, ಅಶೋಕ ತೋಟದ, ಈರಪ್ಪ ಕೊಡಗುಂಟಿ, ರೆಹೆಮಾನ್ ಸಾಬ್ ಮಕಪ್ಪನವರ್, ರಫಿ ಹೀರಳ, ಅಲ್ಲಾವುದ್ದೀನ್ ಎಮ್ಮಿ, ಎಚ್.ಎನ್. ಉಜ್ಜಮ್ಮನವರ, ದಸ್ತಗಿರಿ ಸಾಬ್ ತಳಕಲ್, ಎಲ್ಲಪ್ಪ ಕಲ್ಮನಿ, ತಿಮ್ಮಣ್ಣ ಚೌಡ್ಕಿ, ರಾಮಣ್ಣ ಬಂಕದಮನಿ, ಮೌಲಾಸಾಬ್ ಕೊಪ್ಪಳ, ಹನುಮಂತಪ್ಪ ಉಪ್ಪಾರ, ಮಂಜುನಾಥ ಯಡಿಯಾಪುರ, ರಾಘು ಕಾತರಕಿ, ರಫಿ ಮಂಡಲಗಿರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






