Kuknoor | ಸಂಗನಬಸಪ್ಪ ದೇವಸ್ಥಾನದಲ್ಲಿ ಹಿತ್ತಾಳೆ ಕಳಸ, ಗಂಟೆ ಕಳ್ಳತನ

ಕುಕನೂರು: ಪಟ್ಟಣದ ಕೊಪ್ಪಳ ರಸ್ತೆಯ ಹೊರವಲಯದಲ್ಲಿರುವ ಸಂಗನಬಸಪ್ಪ ದೇವಸ್ಥಾನದ ಗೋಪುರಕ್ಕೆ ಅಳವಡಿಸಿದ್ದ ಹಿತ್ತಾಳೆಯ ಕಳಸ ಹಾಗೂ ದೇವಸ್ಥಾನದೊಳಗಿದ್ದ ಗಂಟೆಯನ್ನು ಕಳ್ಳರು ಸೋಮವಾರ ರಾತ್ರಿ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು 5 ಅಡಿ ಎತ್ತರ ಮತ್ತು 15.5 ಕೆ.ಜಿ. ತೂಕದ ಹಿತ್ತಾಳೆಯ ಕಳಸ ಕಳ್ಳತನವಾಗಿದ್ದು, ಈ ಸಂಬಂಧ ದೇವಸ್ಥಾನ ಸಮಿತಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪಂಪ್‌ಸೆಟ್ ಕೇಬಲ್, ಕುರಿ, ಬೈಕ್, ಅಂಗಡಿಗಳ ಜೊತೆಗೆ ದೇವಸ್ಥಾನಗಳ ಕಳಸ, ಗಂಟೆ ಮತ್ತು ಕಾಣಿಕೆ ಪೆಟ್ಟಿಗೆಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಿ, ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Next Story




