Kuknoor | ನರೇಗಾ ಯೋಜನೆ ಸದುಪಯೋಗಕ್ಕೆ ಕೂಲಿಕಾರರಿಗೆ ಕರೆ

ಕುಕನೂರು : ಜಿಲ್ಲಾ ಪಂಚಾಯತ್ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಅವರು ತಾಲ್ಲೂಕಿನ ಮಸಬಹಂಚಿನಾಳ ಹಾಗೂ ಬೆಣಕಲ್ ಗ್ರಾಮ ಪಂಚಾಯತಿಗಳಿಗೆ ಬುಧವಾರ ಭೇಟಿ ನೀಡಿ, ಹೆಚ್ಚು ಸಂಖ್ಯೆಯಲ್ಲಿ ಕೂಲಿಕಾರರಿಗೆ ಉದ್ಯೋಗ ಒದಗಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಮಸಬಹಂಚಿನಾಳ ಗ್ರಾಮ ಪಂಚಾಯತಿಯ ನಿಟ್ಟಾಲಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣ ಕೂಲಿಕಾರರಿಗೆ ಆಶೀರ್ವಾದದಂತಿದ್ದು, ಸ್ವಂತ ಗ್ರಾಮದಲ್ಲೇ ಉದ್ಯೋಗ ಪಡೆದು ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಕುಟುಂಬದೊಂದಿಗೆ ಸುಖಕರ ಜೀವನ ನಡೆಸಲು ಈ ಯೋಜನೆ ನೆರವಾಗುತ್ತದೆ ಎಂದು ತಿಳಿಸಿದ ಅವರು, ಕೇಂದ್ರ ಸರ್ಕಾರದ ವಿಮಾ ಯೋಜನೆಗಳಾದ ಪಿಎಂಎಸ್‌ಬಿವೈ, ಪಿಎಂಜೇಜೆಬಿವೈ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಹಾಗೂ ಅಟಲ್ ಪೆನ್ಷನ್ ಯೋಜನೆಗಳಲ್ಲಿ ಎಲ್ಲಾ ಕೂಲಿಕಾರರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಮತ್ತು ಅಕಾಲಿಕ ಮರಣದ ಸಂದರ್ಭಗಳಲ್ಲಿ ಕುಟುಂಬದ ಸುರಕ್ಷತೆಗಾಗಿ ಈ ವಿಮಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ತಾಲ್ಲುಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಗ್ರಾಮ ಕಾಯಕ ಮಿತ್ರ ಗೀತಾ ಈಳಿಗೇರ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.






