Kuknoor | ಎರಡು ಬೈಕ್ಗಳ ನಡುವೆ ಅಪಘಾತ: ಯುವಕ ಮೃತ್ಯು, ಮೂವರಿಗೆ ಗಾಯ

ಸಾಂದರ್ಭಿಕ ಚಿತ್ರ
ಕುಕನೂರು: ತಾಲೂಕಿನ ವಿರುಪಾಪುರ ಸೀಮೆಯ ಭಟ್ಟಪ್ಪನಹಳ್ಳಿ ಕ್ರಾಸ್ ಬಳಿ ಗುರುವಾರ ಬೆಳಿಗ್ಗೆ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಕುಕನೂರು ಪಟ್ಟಣದ ನಿವಾಸಿ ಈರಪ್ಪ ಕೋಟಿ ಅವರ ಮೂರನೇ ಪುತ್ರ ಕಿರಣ್ (25) ಮೃತಪಟ್ಟವರು. ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದ ಕಿರಣ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಕಿರಣ್ ಅವರು ಬೆಳಿಗ್ಗೆ 9.10ರ ಸುಮಾರಿಗೆ ಬೈಕ್ನಲ್ಲಿ ಕುಕನೂರಿನಿಂದ ಮಂಡಲಗೇರಿ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಕುಕನೂರಿನ ವಿರೇಶ ಮರಿಯಪ್ಪ ವಡ್ಡರ (20) ಅವರು ಸಂಗನಾಳದ ಆಕಾಶ ಕಲ್ಲಿನಾಥ ಹೂಗಾರ (20) ಹಾಗೂ ಕೋನಾಪುರದ ಕನಕರಾಯ ಶರಣಪ್ಪ ಗೌಡರ (20) ಅವರನ್ನು ಬೈಕ್ನಲ್ಲಿ ಕೂರಿಸಿಕೊಂಡು ಅದೇ ಮಾರ್ಗದಲ್ಲಿ ತೆರಳುತ್ತಿದ್ದರು. ಭಟ್ಟಪ್ಪನಹಳ್ಳಿ ಕ್ರಾಸ್ ಬಳಿ ಎರಡು ಬೈಕ್ಗಳು ಪರಸ್ಪರ ಢಿಕ್ಕಿಯಾಗಿವೆ.
ಅಪಘಾತದಲ್ಲಿ ಕಿರಣ್ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಕುಕನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಕೆ.ಎಸ್. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹುಬ್ಬಳ್ಳಿಗೆ ಕರೆದೊಯ್ಯುವ ಮಾರ್ಗದಲ್ಲಿ ಅಣ್ಣಿಗೇರಿ ಸಮೀಪ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಗಾಯಗೊಂಡ ವಿರೇಶ, ಆಕಾಶ ಹಾಗೂ ಕನಕರಾಯ ಮೂವರೂ ಐಟಿಐ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮೃತ ಕಿರಣ್ ಅವರ ಸಹೋದರ ಮಲ್ಲಿಕಾರ್ಜುನ ಕೋಟಿ ನೀಡಿದ ದೂರಿನ ಮೇರೆಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 133/2026, ಬಿಎನ್ಎಸ್ 2023ರ ಕಲಂ 281, 106, 125(ಎ), 125(ಬಿ) ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






