Kuknoor | ಎಸ್.ಜಾನಕಿ ಅವರಿಗೆ ನುಡಿ ನಮನ, ಗೀತಗಾಯನ ಕಾರ್ಯಕ್ರಮ

ಕುಕನೂರು: ನಾಡಿನ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ನುಡಿ ನಮನ ಸಲ್ಲಿಸಿ, ಅವರ ಜನಪ್ರಿಯ ಗೀತೆಗಳನ್ನು ಸ್ಮರಿಸುವ ಕಾರ್ಯಕ್ರಮವನ್ನು ಸಮಾನ ಮನಸ್ಕರ ಬಳಗದ ವತಿಯಿಂದ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಬಳಗದ ಪ್ರಮುಖ ಮಂಜುನಾಥ್ ಅಂಗಡಿ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಸ್. ಜಾನಕಿ ಅವರು ನೀಡಿರುವ ಕೊಡುಗೆ ಅನನ್ಯವಾಗಿದೆ. ಸಾವಿರಾರು ಗೀತೆಗಳ ಮೂಲಕ ಅವರು ಸಂಗೀತಾಸಕ್ತರ ಮನಸ್ಸಿನಲ್ಲಿ ಅಜರಾಮರರಾಗಿದ್ದು, ಅವರ ಗಾಯನ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ. ಇಂತಹ ಮಹಾನ್ ಕಲಾವಿದರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೀಮಾಶಂಕರ್ ಪಾಣೇಗಾಂವ, ರುದ್ರಪ್ಪ ಭಂಡಾರಿ, ಚಂದ್ರು ಭಾನಾಪುರ, ಬಸವರಾಜ ಕೊಡ್ಲಿ, ಮುರಾರಿ ಭಜಂತ್ರಿ, ಬಸವರಾಜ್ ಕೊನಾರಿ, ವಸಂತ ಗುಡಿ, ಸಲೀಂ ಅಮರಾವತಿ ಸೇರಿದಂತೆ ಸಮಾನ ಮನಸ್ಕರ ಬಳಗದ ಸದಸ್ಯರು ಹಾಗೂ ಸಂಗೀತಾಸಕ್ತರು ಭಾಗವಹಿಸಿ ಎಸ್. ಜಾನಕಿ ಅವರಿಗೆ ನುಡಿ ನಮನ ಸಲ್ಲಿಸಿದರು.
ಎಸ್. ಜಾನಕಿ ಅವರು ಕೇವಲ ಹಿನ್ನೆಲೆ ಗಾಯಕಿಯಲ್ಲ, ಭಾರತೀಯ ಸಂಗೀತ ಲೋಕದ ಅಮೂಲ್ಯ ಧ್ವನಿಯಾಗಿದ್ದರು. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗುವ ಮೂಲಕ ಕೋಟ್ಯಂತರ ಸಂಗೀತಾಸಕ್ತರ ಮನ ಗೆದ್ದಿದ್ದಾರೆ. ಅವರ ಕಂಠಸಿರಿ, ಭಾವಪೂರ್ಣ ಗಾಯನ ಹಾಗೂ ಸಂಗೀತದ ಮೇಲಿನ ಸಮರ್ಪಣೆ ಸದಾ ಸ್ಮರಣೀಯವಾಗಿದ್ದು, ಅವರ ಹಾಡುಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿವೆ.
-ಬಸವರಾಜ ಉಪ್ಪಿನ್, ತಾಲ್ಲೂಕು ಅಧ್ಯಕ್ಷ, ಚುಟುಕು ಸಾಹಿತ್ಯ ಪರಿಷತ್ತು






