ಕುಷ್ಟಗಿ | ಪಿಎಂ ವಿಶ್ವಕರ್ಮ ಯೋಜನೆ ಕಿಟ್ ವಿತರಣೆಯಲ್ಲಿ ಅವ್ಯವಸ್ಥೆ ಆರೋಪ : ಯುವಕರಿಂದ ಪ್ರತಿಭಟನೆ

ಕುಷ್ಟಗಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ವಿತರಿಸಬೇಕಾದ 15,000 ರೂ. ಮೌಲ್ಯದ ಕಟಿಂಗ್ (ಸಲೂನ್) ಕಿಟ್ ವಿತರಣೆಯಲ್ಲಿ ಭಾರೀ ಅವ್ಯವಸ್ಥೆ ನಡೆದಿದೆ ಎಂದು ಆರೋಪಿಸಿ, ಕಟಿಂಗ್ ಸಲೂನ್ ಹಾಗೂ ಹಡಪದ ಸಮುದಾಯದ ಯುವಕರು ಸೋಮವಾರ ಹನುಮಸಾಗರ ಪೋಸ್ಟ್ ಆಫೀಸ್ ಮುಂದೆ ಪ್ರತಿಭಟನೆ ನಡೆಸಿದರು.
ಪಿಎಂ ವಿಶ್ವಕರ್ಮ ಯೋಜನೆಯಡಿ ಆಯ್ಕೆಯಾದ ಲಾಭಾರ್ಥಿಗಳಿಗೆ 15 ದಿನಗಳ ತರಬೇತಿ, ತರಬೇತಿ ಅವಧಿಯಲ್ಲಿ 15,000 ರೂ. ಗೌರವಧನ, ನಂತರ ಸಬ್ಸಿಡಿ ಸಾಲ ಸೌಲಭ್ಯ ಹಾಗೂ 15,000 ರೂ. ಮೌಲ್ಯದ ವೃತ್ತಿ ಸಂಬಂಧಿತ ಕಿಟ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅದರಂತೆ ಕಟಿಂಗ್ ಕಿಟ್‌ಗಳನ್ನು ಪೋಸ್ಟ್ ಆಫೀಸ್ ಮೂಲಕ ವಿತರಿಸಬೇಕಾಗಿತ್ತು. ಆದರೆ, ಹನುಮಸಾಗರ ಪೋಸ್ಟ್ ಆಫೀಸ್‌ನಲ್ಲಿ ವಿತರಿಸಲಾದ ಕಿಟ್‌ಗಳಲ್ಲಿ ಪೂರ್ಣ ಸಾಮಾನುಗಳೇ ಇಲ್ಲ. ಒಂದು ಕಿಟ್‌ನಲ್ಲಿ ಬರಬೇಕಾದ 15,000 ರೂ. ಮೌಲ್ಯದ ಉಪಕರಣಗಳ ಬದಲು ಕೇವಲ 1,000 ರೂ. ರಿಂದ 1,500 ರೂ. ಮೌಲ್ಯದ ಕೆಲವೇ ಸಾಮಾನುಗಳು ಮಾತ್ರ ದೊರೆತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುರೇಶ ಹಡಪದ, ಭರತ ಹಡಪದ, ರುದ್ರಪ್ಪ ಹೊನ್ನಪ್ಪ ಹಡಪದ, ಮಂಜುನಾಥ ಶಂಕ್ರರಪ್ಪ ಹಡಪದ, ಮಲ್ಲಪ್ಪ ಹಡಪದ, ಶಾಣಪ್ಪ ಹಡಪದ, ವರುಣ ಹಡಪದ ಹಾಗೂ ಯಮನೂರಪ್ಪ ಹಡಪದ ಮಾತನಾಡಿ, ನಿಯಮಾನುಸಾರ ಟ್ರೈನರ್ ಅಥವಾ ಅಧಿಕಾರಿಗಳ ಸಮ್ಮುಖದಲ್ಲೇ ಕಿಟ್‌ನ ಸೀಲ್ ತೆರೆಯಬೇಕು. ಆದರೆ ಇಲ್ಲಿ ನಾವು ಬರುವುದಕ್ಕೂ ಮುಂಚೆಯೇ ಕಿಟ್‌ಗಳನ್ನು ತೆರೆಯಲಾಗಿದ್ದು, ಅಪೂರ್ಣ ಸಾಮಾನುಗಳನ್ನು ವಿತರಿಸಲಾಗಿದೆ. ಕೆಲವರಿಗೆ ಸಂಪೂರ್ಣ ಕಿಟ್ ನೀಡಲಾಗಿದ್ದು, ನಮಗೆ ಮಾತ್ರ ಅಲ್ಪ ಪ್ರಮಾಣದ ಸಾಮಾನುಗಳು ಸಿಕ್ಕಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪೋಸ್ಟ್ ಆಫೀಸ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ಮೇಲಿನಿಂದ ಬಂದಿರುವಂತೆ ವಿತರಿಸಲಾಗಿದೆ” ಎಂಬ ಜವಾಬ್ದಾರಿ ತಪ್ಪಿಸುವ ಉತ್ತರ ನೀಡುತ್ತಿದ್ದಾರೆ. ಯಾವುದೇ ಸ್ಪಷ್ಟ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.







