ಕುಷ್ಟಗಿ | ಡಿವೈಡರ್ ಹಾರಿ ಕ್ಯಾಂಟರ್ಗೆ ಢಿಕ್ಕಿ ಹೊಡೆದ ಕಾರು: ಮಹಿಳೆಗೆ ಗಂಭೀರ ಗಾಯ
ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಕುಷ್ಟಗಿ: ರಾಷ್ಟ್ರೀಯ ಹೆದ್ದಾರಿ-50ರ ವಣಗೇರಾ ಗ್ರಾಮದ ವ್ಯಾಪ್ತಿಯ ಜಿಯೋ ಪೆಟ್ರೋಲ್ ಬಂಕ್ ಬಳಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕ (ಡಿವೈಡರ್) ಹಾರಿ ಕ್ಯಾಂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರು ನಿವಾಸಿ ಪ್ರಣಮ್ ಶರ್ಮಾ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು, ಅಪಘಾತದಲ್ಲಿ ಅವರ ಎರಡೂ ಕಾಲುಗಳು ಮಂಡಿಯ ಕೆಳಭಾಗದಲ್ಲಿ ಮುರಿದಿವೆ. ಕಾರು ಚಾಲನೆ ಮಾಡುತ್ತಿದ್ದ ಅವರ ಪತಿ ರಾಜೀವ್ ಶರ್ಮಾ ಅವರಿಗೂ ಗಾಯಗಳಾಗಿವೆ.
ಕಲಬುರಗಿ ಮೂಲದ ರೇವಣಸಿದ್ದಪ್ಪ ಕುಂಬಾರ ಅವರು ಕ್ಯಾಂಟರ್ ವಾಹನದಲ್ಲಿ ಕುಷ್ಟಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಕುಷ್ಟಗಿ ಕಡೆಯಿಂದ ಬಂದ ಹುಂಡೈ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಕ್ಯಾಂಟರ್ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಪ್ರಣಮ್ ಶರ್ಮಾ ಅವರ ಎರಡೂ ಕಾಲುಗಳು ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕ್ಯಾಂಟರ್ ಚಾಲಕ ರೇವಣಸಿದ್ದಪ್ಪ ಕುಂಬಾರ ನೀಡಿದ ದೂರಿನ ಮೇರೆಗೆ ಕಾರು ಚಾಲಕ ರಾಜೀವ್ ಶರ್ಮಾ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






