ಕೊಪ್ಪಳ ಜಿಲ್ಲೆಯಲ್ಲಿ ಆಹಾರ ಯೋಜನೆಗಳ ಅನುಷ್ಠಾನದಲ್ಲಿ ಲೋಪ: ಡಾ.ಎಚ್.ಕೃಷ್ಣ

ಕೊಪ್ಪಳ : ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳು, ವಸತಿ ನಿಲಯಗಳು, ಗೋದಾಮುಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿದ ವೇಳೆ ಹಲವು ಲೋಪಗಳು ಪತ್ತೆಯಾಗಿದ್ದು, ತಕ್ಷಣ ಸುಧಾರಣಾ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 19ರಿಂದ 21ರವರೆಗೆ ಜಿಲ್ಲೆಯ ವಿವಿಧೆಡೆ ಅನಿರೀಕ್ಷಿತ ಭೇಟಿ ನಡೆಸಿ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.
ಆಯೋಗದ ಸದಸ್ಯರು ಮೂರು ತಂಡಗಳಾಗಿ ವಿಭಜನೆಗೊಂಡು ಕಾರ್ಯಾಚರಣೆ ನಡೆಸಿದ್ದು, ಗಾಂಧೀನಗರದ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ಖರೀದಿ ಬಿಲ್ಲುಗಳಲ್ಲಿ ವ್ಯತ್ಯಾಸ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆಹಾರ ವಿತರಣೆ ದಾಖಲೆಗಳಲ್ಲಿ ಲೋಪ ಕಂಡುಬಂದಿವೆ ಎಂದು ತಿಳಿಸಿದರು.
ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ರೋಗಿಗಳಿಗೆ ಸಮರ್ಪಕ ಆಹಾರ ನೀಡದಿರುವುದು, ಅಶುದ್ಧ ಆಹಾರ, ಅವಧಿ ಮುಗಿಯುವ ಮಸಾಲೆ ಪದಾರ್ಥ ಸಂಗ್ರಹಣೆ ಹಾಗೂ ಮಕ್ಕಳ ಆರೈಕೆ ವಿಭಾಗದಲ್ಲಿ ಪೌಷ್ಠಿಕ ಆಹಾರ ಕೊರತೆ ಪತ್ತೆಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರಿದ ನರ್ಸಿಂಗ್ ಸೂಪರಿಂಟೆಂಡೆಂಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಲಾಗಿದೆ. ಕಳಪೆ ಆಹಾರ ಧಾನ್ಯ ಪೂರೈಸುತ್ತಿರುವ ಟೆಂಡರ್ ರದ್ದುಗೊಳಿಸಿ, ಗುಣಮಟ್ಟದ ಸರಬರಾಜುದಾರರಿಗೆ ಟೆಂಡರ್ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಆಯೋಗದ ಸದಸ್ಯರಾದ ಸುಮಂತ್ ರಾವ್ ಹಾಗೂ ಎ. ರೋಹಿಣಿ ಪ್ರಿಯಾ ಅವರು ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳಲ್ಲಿ ಗೋದಾಮುಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಕೊರತೆಗಳನ್ನು ಗುರುತಿಸಿದ್ದಾರೆ.
ಇನ್ನು ಸದಸ್ಯರಾದ ಲಿಂಗರಾಜ ಕೋಟೆ ಮತ್ತು ಕೆ.ಎಸ್. ವಿಜಯಲಕ್ಷ್ಮಿ ಅವರು ಗಂಗಾವತಿ ಹಾಗೂ ಕಾರಟಗಿ ಭಾಗಗಳಲ್ಲಿ ಪರಿಶೀಲನೆ ನಡೆಸಿ ಹಲವು ಲೋಪಗಳನ್ನು ಪತ್ತೆಹಚ್ಚಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಆಹಾರ ಭದ್ರತಾ ಯೋಜನೆಗಳ ಪಾರದರ್ಶಕ ಅನುಷ್ಠಾನ ಹಾಗೂ ಫಲಾನುಭವಿಗಳ ಹಕ್ಕುಗಳ ರಕ್ಷಣೆಗೆ ಆಯೋಗ ಬದ್ಧವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರ ಅಡಿಯಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆ, ಮಧ್ಯಾಹ್ನ ಉಪಾಹಾರ ಯೋಜನೆ, ಪೌಷ್ಠಿಕ ಆಹಾರ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನವನ್ನು ಆಯೋಗ ಪರಿಶೀಲಿಸುತ್ತದೆ ಎಂದು ಡಾ. ಹೆಚ್. ಕೃಷ್ಣ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಯ ಮತ್ತು ಕೆ.ಎಸ್.ವಿಜಯಲಕ್ಷ್ಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






