ಡಾ.ಎಸ್.ಎಲ್.ಭೈರಪ್ಪ ಅವರ ನಿಧನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ: ಸಚಿವ ಶಿವರಾಜ್ ತಂಗಡಗಿ ಸಂತಾಪ

ಕೊಪ್ಪಳ : ಕನ್ನಡದ ದಿಗ್ಗಜ ಕಾದಂಬರಿಕಾರ, ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಗೌರವ ತಂದ ಡಾ.ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್. ತಂಗಡಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭೈರಪ್ಪನವರು ಕನ್ನಡದ ಸಾರಸ್ವತ ಲೋಕದ ಅಪಾರ ಆಸ್ತಿ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ತಿಳಿಸಿದ್ದಾರೆ.
ಭೈರಪ್ಪ ಅವರು ಪ್ರಪಂಚದಾದ್ಯಂತ ಅಸಂಖ್ಯಾತ ಓದುಗರನ್ನು ಹೊಂದಿದ್ದ ಅಪರೂಪದ ಕನ್ನಡ ಕಾದಂಬರಿಕಾರರು. ನಿರ್ದಿಷ್ಟ ಪ್ರಕಾರಕ್ಕೆ ಸೀಮಿತರಾಗದೇ, ವಿಶಿಷ್ಟ ನಿರೂಪಣಾ ಶೈಲಿಯಿಂದ ದೇಶ–ವಿದೇಶಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಪದ್ಮಭೂಷಣ, ಪದ್ಮಶ್ರೀ, ಸರಸ್ವತಿ ಸಮ್ಮಾನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದರು.
ಹಾಸನ ಜಿಲ್ಲೆಯ ಸಂತೆಶಿವರದಲ್ಲಿ ಜನಿಸಿದ ಭೈರಪ್ಪ ಅವರು, ತಮ್ಮ ಅಸಾಮಾನ್ಯ ಪ್ರತಿಭೆಯಿಂದ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದರು. ಅವರ ಪರ್ವ ಕೃತಿ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಭೀಮಕಾಯ ಅವರ ಮೊದಲ ಕಾದಂಬರಿಯಾಗಿದ್ದು, ವಂಶವೃಕ್ಷ, ತಬ್ಬಲಿಯೂ ನೀನಾದೆ ಮಗನೆ, ಮತದಾನ ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ಜನಪ್ರಿಯವಾಗಿವೆ.
ಭೈರಪ್ಪನವರ ಕಾದಂಬರಿಗಳಲ್ಲಿ ಮಾನವೀಯತೆ, ಸಂವೇದನಾಶೀಲತೆ ಮತ್ತು ಸಮಾಜಮುಖಿ ಚಿಂತನೆಗಳು ತುಂಬಿಕೊಂಡಿದ್ದು, ಹಲವಾರು ಕೃತಿಗಳು ನಾಟಕ, ಸಿನಿಮಾ, ಧಾರಾವಾಹಿಗಳ ರೂಪದಲ್ಲಿಯೂ ಜನಮನ ಗೆದ್ದಿವೆ. ಗೃಹಭಂಗ ಕಾದಂಬರಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಜನಪ್ರಿಯತೆಯನ್ನು ಗಳಿಸಿತ್ತು.
ಭೈರಪ್ಪ ಅವರ ಜೀವನ ಕಥನ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.







