ಕೊಪ್ಪಳದ ಇಬ್ಬರು ಶಾಸಕರಿಗೆ ಸಚಿವ ಸ್ಥಾನ; ರಾಘವೇಂದ್ರ ಹಿಟ್ನಾಳ್ಗೆ ನಿರಾಸೆ

ಬಸವರಾಜ ರಾಯರೆಡ್ಡಿ, ಶಿವರಾಜ್ ತಂಗಡಗಿ, ಕೆ.ರಾಘವೇಂದ್ರ ಹಿಟ್ನಾಳ್
ಕೊಪ್ಪಳ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಪ್ಪಳ ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರಿಗೆ ಈ ಬಾರಿಯೂ ಅವಕಾಶ ದೊರೆಯದಿರುವುದು ಅವರ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ.
ಯಲಬುರ್ಗಾ ಕ್ಷೇತ್ರದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ಲಭಿಸಿದೆ. ರಾಜ್ಯ ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿರುವ ಅವರು ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಸಚಿವ ಸಂಪುಟದಲ್ಲಿ ಅವಕಾಶ ಕೈತಪ್ಪಿದ್ದರೂ, ಈ ಬಾರಿ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
1985ರಿಂದ ವಿವಿಧ ಅವಧಿಗಳಲ್ಲಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಸವರಾಜ ರಾಯರೆಡ್ಡಿ ಅವರು 1996ರಿಂದ 1998ರವರೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸಚಿವರಾಗಿ, ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಹಾಗೂ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.
ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಸಂಗಪ್ಪ ತಂಗಡಗಿ ಅವರಿಗೂ ಮತ್ತೊಮ್ಮೆ ಸಚಿವ ಸ್ಥಾನ ದೊರೆತಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲೂ ಸ್ಥಾನ ಪಡೆದಿದ್ದಾರೆ.
1971ರ ಜೂನ್ 10ರಂದು ಜನಿಸಿದ ಶಿವರಾಜ್ ತಂಗಡಗಿ ಅವರು ಇಲಕಲ್ನ ಎಸ್ವಿಎಂ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದು, ಕೃಷಿ ಹಾಗೂ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. 2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕನಕಗಿರಿಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಬಳಿಕ ಕಾಂಗ್ರೆಸ್ ಸೇರಿ 2013 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲೂ ಜಯಗಳಿಸಿ ಮೂರು ಬಾರಿ ಶಾಸಕರಾಗಿದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 1,06,164 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಬಸವರಾಜ ಢಡೇಸುಗೂರ ಅವರನ್ನು 42,632 ಮತಗಳ ಅಂತರದಿಂದ ಸೋಲಿಸಿದ್ದರು. ಕನಕಗಿರಿ ಕ್ಷೇತ್ರದಲ್ಲಿ ಅವರ ರಾಜಕೀಯ ಪ್ರಭಾವ ಹಾಗೂ ಆಡಳಿತ ಅನುಭವದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
ರಾಘವೇಂದ್ರ ಹಿಟ್ನಾಳ್ಗೆ ಮತ್ತೆ ಕೈತಪ್ಪಿದ ಸಚಿವ ಸ್ಥಾನ :
ಸತತ ಮೂರು ಬಾರಿ ಕೊಪ್ಪಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕೆ. ರಾಘವೇಂದ್ರ ಹಿಟ್ನಾಳ್ ಈ ಬಾರಿ ಸಚಿವ ಸ್ಥಾನ ಪಡೆಯುವ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಸಚಿವ ಸ್ಥಾನಕ್ಕಾಗಿ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದರೂ, ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಸೇರಿಲ್ಲ.
ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನಿರಾಸೆ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವ ಸ್ಥಾನ ನೀಡದಿರುವ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯ ರಾಜಕೀಯ ವಿಶ್ಲೇಷಣೆಗಳು ಮತ್ತು ಊಹಾಪೋಹಗಳು ಹರಿದಾಡುತ್ತಿದ್ದು, ಅವುಗಳಿಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.






