ಮುನಿರಾಬಾದ್ | ಬೇವಿನಹಳ್ಳಿ ಸರಕಾರಿ ಪ್ರೌಢಶಾಲೆಗೆ 1 ಎಕರೆ 30 ಗುಂಟೆ ಜಮೀನು ದಾನ

ಕೊಪ್ಪಳ : ಮುನಿರಾಬಾದ್ ಸಮೀಪದ ಬೇವಿನಹಳ್ಳಿ ಗ್ರಾಮದ ಶಿಕ್ಷಣಾಭಿವೃದ್ಧಿಗೆ ಕೈಜೋಡಿಸಿರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಎಫ್‌ಐಎಲ್) ಸಂಸ್ಥೆ, ಗ್ರಾಮದ ಸರ್ಕಾರಿ ಪ್ರೌಢಶಾಲೆಗಾಗಿ 1 ಎಕರೆ 30 ಗುಂಟೆ ಜಮೀನನ್ನು ಖರೀದಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಿದೆ.
2024-25ನೇ ಸಾಲಿನಲ್ಲಿ ಆರಂಭವಾದ ಸರ್ಕಾರಿ ಪ್ರೌಢಶಾಲೆಗೆ ಕಟ್ಟಡ ನಿರ್ಮಾಣಕ್ಕಾಗಿ ಜಾಗದ ಅಗತ್ಯತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಿರ್ಲೋಸ್ಕರ್ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಂಸ್ಥೆ, ಬೇವಿನಹಳ್ಳಿಯ ಹಿರೇಮಠ ಕುಟುಂಬದಿಂದ ಜಮೀನು ಖರೀದಿಸಿ ಉಚಿತವಾಗಿ ಶಾಲೆಗೆ ನೀಡಿದೆ.
ಈ ಕುರಿತು ಮಾತನಾಡಿದ ಕಂಪನಿಯ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಉಪಾಧ್ಯಕ್ಷ ಶಿವಯ್ಯ ಬಿ. ಸ್ವಾಮಿ, “ಬೇವಿನಹಳ್ಳಿ ಗ್ರಾಮದಲ್ಲಿ ಈಗಾಗಲೇ ಧಾರ್ಮಿಕ ಕೇಂದ್ರಗಳು, ಶಾಲಾ ಕಟ್ಟಡಗಳು, ಆಸ್ಪತ್ರೆಗಳು ಹಾಗೂ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಬದ್ಧವಾಗಿದೆ” ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕೆಎಫ್‌ಐಎಲ್ ಸಂಸ್ಥೆ ಸಾಮಾಜಿಕ ಜವಾಬ್ದಾರಿಯಡಿ ಸಹಕಾರ ನೀಡುತ್ತಿದೆ ಎಂದು ಅವರು ತಿಳಿಸಿದರು.
ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಕಿರಣ್ ಶೇಜೆಕರ್ ಮಾತನಾಡಿ, “ಶಿಕ್ಷಣಾಭಿವೃದ್ಧಿ, ಗ್ರಾಮೀಣ ಉನ್ನತೀಕರಣ ಮತ್ತು ಸುಸ್ಥಿರ ಸಮುದಾಯ ಕಲ್ಯಾಣ ಕಾರ್ಯಕ್ರಮಗಳತ್ತ ಕಿರ್ಲೋಸ್ಕರ್ ಸಂಸ್ಥೆ ಸದಾ ಬದ್ಧವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಶಿಕಾಂತ ಬಿರದಾರ, ಉಪಪ್ರದಾನ ವ್ಯವಸ್ಥಾಪಕರು-ಮಾನವ ಸಂಪನ್ಮೂಲ ಹಾಗೂ ಉದ್ದವ್ ಕುಲಕರ್ಣಿ, ವ್ಯವಸ್ಥಾಪಕರು-ಸಿಎಸ್‌ಆರ್, ಗ್ರಾಮದ ಹಿರಿಯರಾದ ಶ್ರೀ ಬೀಮಣ್ಣ ಮೂಲಿಮನಿ, ಎಸ್ ಬಿ ಬಸವರಾಜ, ಮಾರ್ಕಂಡಪ್ಪ ಅಜಗರ್, ಯಂಕನಗೌಡ ಪಾಟೀಲ್, ಮುದ್ದಪ್ಪ ಗೊಂದಿಹೊಸಳ್ಳಿ, ನಾಗರಾಜ ಬಿ, ಬಸವರಾಜ ಮಡ್ಡಿ, ಮಾರುತಿ ಬಿ, ಬಸವರಾಜ್ ಬಿ, ಪಂಪಣ್ಣ ಎಸ್, ಶಿವಮೂರ್ತಿ ಎಂ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






