ಮುಸ್ಲಿಮರು ಒಬ್ಬರನ್ನು ನೋಡಿ ಮತ ನೀಡುತ್ತಾರೆ ಅಂದುಕೊಂಡಿದ್ದರೆ ಅಂತವರು ಆ ಭ್ರಮೆಯಿಂದ ಹೊರ ಬರಲಿ: ಸಲೀಂ ಅಹ್ಮದ್

ಕೊಪ್ಪಳ: ಮುಸ್ಲಿಂ ಸಮುದಾಯದವರು ಯಾರನ್ನಾದರೂ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ಭಾವಿಸುವವರು ಭ್ರಮೆಯಲ್ಲಿ ಇದ್ದಾರೆ, ಅಂತಹವರು ತಮ್ಮ ಭ್ರಮೆಯಿಂದ ಹೊರಬರಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಕೊಪ್ಪಳದಲ್ಲಿ ಖಾಸಗಿ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ತಾವು ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಮನವಿ ಮಾಡಿದ್ದೇವು ಎಂದು ಹೇಳಿದರು.
ಆದರೆ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ, ಪಕ್ಷದ ನಾಯಕರ ನಿಧನವಾದ ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದೇ ರೀತಿಯಲ್ಲಿ ಈ ಕ್ಷೇತ್ರದಲ್ಲೂ ಟಿಕೆಟ್ ಹಂಚಿಕೆ ನಡೆದಿದೆ ಎಂದು ತಿಳಿಸಿದರು.
ಎಲ್ಲರೂ ಒಪ್ಪಿಗೆಯೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವರ್ಷಗಳ ಮಟ್ಟಿಗೆ ಮಾತ್ರ ಈ ನಿರ್ಧಾರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಮುಕ್ತಗೊಳಿಸುವ ಭರವಸೆ ಪಕ್ಷದ ನಾಯಕರು ನೀಡಿದ್ದಾರೆ ಎಂದು ಹೇಳಿದರು.
ಅಬ್ದುಲ್ ಜಬ್ಬಾರ್ ಅವರ ಅಮಾನತ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಬಳಿಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಸಚಿವ ಸಂಪುಟ ಪುನರ್‌ರಚನೆ ಕುರಿತು ಮಾತನಾಡಿದ ಅವರು, ಸಂಪುಟ ರಚನೆಯಾಗಿ ಮೂರು ವರ್ಷವಾದರೂ ಇನ್ನೂ ಪುನರ್‌ರಚನೆ ಆಗಿಲ್ಲ. ಆದರೆ ಒಳ್ಳೆಯದು ಎಂದು ಹೇಳಿದರು.






