ಕನಕಗಿರಿಯಲ್ಲಿ ಸಡಗರದ ನಾಗರ ಪಂಚಮಿ ಆಚರಣೆ

ಕನಕಗಿರಿ: ಪಟ್ಟಣದಲ್ಲಿ ನಾಗರ ಪಂಚಮಿ ಹಬ್ಬವನ್ನು ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಉತ್ತರ ಕರ್ನಾಟಕ ಭಾಗದಲ್ಲಿ ‘ಮಹಿಳೆಯರ ಹಬ್ಬ’ ಎಂದು ಪ್ರಸಿದ್ಧಿ ಪಡೆದಿರುವ ನಾಗರ ಪಂಚಮಿಯನ್ನು ಹೊಸದಾಗಿ ಮದುವೆಯಾದ ವಧುಗಳು ಗಂಡನ ಮನೆಯಲ್ಲಿ ಆಚರಿಸುವುದು ಸಂಪ್ರದಾಯವಾಗಿದೆ. ಹಬ್ಬದ ಅಂಗವಾಗಿ ವಿವಿಧ ವಾರ್ಡ್‌ಗಳಲ್ಲಿರುವ ಬಾವಿಗಳ ಬಳಿ ಪ್ರತಿಷ್ಠಾಪಿಸಿದ್ದ ನಾಗಮೂರ್ತಿಗಳಿಗೆ ಮಹಿಳೆಯರು ಹಾಗೂ ಮಕ್ಕಳು ಹಾಲು ಅರ್ಪಿಸಿ ಪೂಜೆ ಸಲ್ಲಿಸಿದರು.
ಗೊಲ್ಲರವಾಡಿ, ಮಡ್ಡೇರವಾಡಿ, ಗಂಗಾಕ್ಯಾಂಪ್, ಗೊಲಗೇರಪ್ಪ ಕಾಲೊನಿ, ನಾಯಕರ, ಕಲ್ಲಬಾಗಿಲಮಠ, ಕಮ್ಮಾರ ಓಣಿ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಮಹಿಳೆಯರು ಹೊಸ ಬಟ್ಟೆ ಹಾಗೂ ಬಂಗಾರದ ಆಭರಣಗಳನ್ನು ಧರಿಸಿ ನಾಗಮೂರ್ತಿಗಳಿಗೆ ಹಾಲು ಅರ್ಪಿಸಲು ತೆರಳುತ್ತಿದ್ದ ದೃಶ್ಯ ಕಂಡುಬಂತು.
ಎಳ್ಳು, ಶೇಂಗಾ, ಸಜ್ಜೆ, ಅರಳುಹಿಟ್ಟಿನ ಹುಂಡಿ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನಾಗಮೂರ್ತಿಯ ಮುಂದೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.
ಗ್ರಾಮೀಣ ಭಾಗದಲ್ಲಿ ಯುವಕರು ಅಲ್ಲಲ್ಲಿ ಜೋಕಾಲಿ ಕಟ್ಟಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.




