ಶ್ರೀರಾಮುಲು-ಜನಾರ್ದನ ರೆಡ್ಡಿ ಜೊತೆ ಚರ್ಚೆ : ವಿಜಯೇಂದ್ರ

ಕೊಪ್ಪಳ : ‘ಮಾಜಿ ಸಚಿವರಾದ ಬಿ.ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿ ನಮ್ಮ ಪಕ್ಷದ ದೊಡ್ಡ ಶಕ್ತಿ. ಅವರು ಒಟ್ಟಾಗಿ, ಒಂದಾಗಿ ಚುನಾವಣೆಗೆ ಹೋದಾಗ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗೆದ್ದಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ ಇಬ್ಬರೂ ಬಿಜೆಪಿ ಪಕ್ಷಕ್ಕೆ ನಿಷ್ಠೆಯನ್ನು ಇಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸಲು ನನಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ. ಹೀಗಾಗಿ ಅವರೊಂದಿಗೆ ಚರ್ಚಿಸಲಿದ್ದೇನೆ ಎಂದರು.
ಮೊದಲು ಉತ್ತರ ನೀಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಮೊದಲು ಉತ್ತರ ನೀಡಲಿ. ಆ ಬಳಿಕ ವಿರೋಧ ಪಕ್ಷದವರ ವಿರುದ್ಧ ಸವಾಲು ಹಾಕಲಿ. ರಾಜ್ಯದ ಜನ ಮೈಸೂರಿನ ಸಮಾವೇಶದಲ್ಲಿ ಏನು ನಡೆದಿದೆ ಎನ್ನುವುದನ್ನು ನೋಡಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅನುದಾನವಿಲ್ಲದೆ ಶಾಸಕರು ಪರದಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕಾಂಗ್ರೆಸ್ ಶಾಸಕರಿಗೆ ಮಾತ್ರ ಸಿಎಂ ಆಗಿದ್ದಾರೋ ಎನ್ನುವ ರೀತಿಯಲ್ಲಿ ಜನರು ಚರ್ಚೆ ಮಾಡುತ್ತಿದ್ದಾರೆ. ಅಭಿವೃದ್ಧಿಗೆ 50 ಕೋಟಿ ರೂ.ಅನುದಾನ ನೀಡುತ್ತೇವೆ ಎಂದು ಯಾವುದೇ ದಾಖಲೆಯನ್ನು ಸಿದ್ದರಾಮಯ್ಯ ನೀಡಿಲ್ಲ ಎಂದು ಅವರು ದೂರಿದರು.







