ಬಾಲ್ದೋಟ ಕಾರ್ಖಾನೆ ವಿರುದ್ಧ ಧರಣಿ: ಒಂಭತ್ತು ಮಂದಿಯ ವಿರುದ್ಧ ಎಫ್ಐಆರ್

ಕೊಪ್ಪಳ: ಬಾಲ್ದೋಟ ಕಾರ್ಖಾನೆ ವಿರುದ್ಧ ಧರಣಿ ನಡೆಸಿದ್ದ ಒಂಭತ್ತು ಮಂದಿ ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದನಕರುಗಳಿಗೆ ನೀರು ಕುಡಿಯಲು ಕಾರ್ಖಾನೆ ಆವರಣದಲ್ಲಿರುವ ಕೆರೆಯನ್ನು ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕಳೆದ ಬುಧವಾರ ಜಿಲ್ಲಾಡಳಿತ ಭವನ ಮತ್ತು ಬಾಲ್ದೋಟ ಕಾರ್ಖಾನೆಯ ಮುಂದೆ ಧರಣಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಖಾನೆಯ ಸಿಬ್ಬಂದಿ ಮತ್ತು ಹೋರಾಟಗಾರ ನಡುವೆ ವಾಗ್ವಾದ ನಡೆದಿತ್ತು.
ಧರಣಿನಿರತರು ಬಿ.ಎಸ್.ಪಿ.ಎಲ್. ಬಾಲ್ದೋಟ ಕಂಪೆನಿಯ ಮುಖ್ಯು ದ್ವಾರದ ಹತ್ತಿರ ಕರ್ತವ್ಯದಲ್ಲಿ ಇದ್ದಾಗ ಸ್ವಲ್ಪ ಜನರು ಬಲ್ನೋಟಾ ಕಂಪನಿಯ ಆವರಣದೊಳಗೆ ಸುಮಾರು 1000ಕ್ಕೂ ಹೆಚ್ಚು ನನಗಳನ್ನು ಮತ್ತು ಕುರಿಗಳನ್ನು ಒಡೆದುಕೊಂಡು ಬಂದು ನಮ್ಮ ಕಂಪನಿಯ ದಿನನಿತ್ಯದ ಕೆಲಸ ಕಾರ್ಯಗಳಗಳಿಗೆ ಅಡ್ಡಿಯುಂಟು ಮಾಡಿದ್ದಾರೆ. ಈ ವೇಳೆ ನಾನು ಸೇರಿದಂತೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಬಸವರಾಜ ಬ್ಯಾಳಿ, ಬಸವರಾಜ ಪಟ್ಟಣಶೆಟ್ಟಿ, ನಾಗರಾಜ ಬೋಸಗಿ, ಚಂದ್ರಶೇಖರ ಇಂಜಗಿನಿರಿ, ಮಂಜುನಾಥ ಬಾರಕೇರ ಇತರರು ಸೇರಿ ಅವರನ್ನು ತಡೆಯಲು ಪ್ರಯತ್ನಿಸಿದೆವು. ಆದರೆ ಧರಣಿನಿರತರು ನಮ್ಮನ್ನು ತಳ್ಳಿ ದನ, ಕುರಿಗಳೊಂದಿಗೆ ಬಲವಂತವಾಗಿ ನಮ್ಮ ಕಂಪನಿ ಒಳಗೆ ಪ್ರವೇಶಿಸಿದ್ದಾರೆ. ಬಿ.ಎಸ್.ಪಿ.ಎಲ್ ಕಂಪನಿಯ ಒಳಗೆ ಅನಧಿಕೃತವಾಗಿ ಮೂಕ ಪ್ರಾಣಿಗಳೊಂದಿಗೆ ಪ್ರವೇಶ ಮಾಡಿ ತೊಂದರೆ ಉಂಟು ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕೆಂದು ಕುಂದಾಪುರ ಮೂಲದ ಸೆಕ್ಯುರೆಟಿ ಮ್ಯಾನೇಜರ್ ಆದ ಎಂ. ಮಹೇಶ್ ಎಂಬುವರು ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅದರಂತೆ ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಅಲ್ಲಮ ಪ್ರಭು ಬೆಟದೂರು, ಹನುಮಂತಪ್ಪ ಕಲ್ಕೆರಿ, ಮಂಗಳೇಶ್ ರಾಥೋಡ್, ಮುದುಕಪ್ಪ ಹೊಸಮನಿ, ಕೆ.ಬಿ ಗೋನಾಳ್, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಕೇರಿ ಹಾಗೂ ಎ.ಗಫಾರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.





