ನರೇಗಾ ನೌಕರರಿಗೆ ಸೇವಾ ಭದ್ರತೆ ಒದಗಿಸಿ: ಶಾಸಕ ಬಸವರಾಜ ರಾಯರೆಡ್ಡಿಗೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ

ಯಲಬುರ್ಗಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಕಲ್ಪಿಸುವ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಸಬೇಕೆಂದು ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘವು ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರಾದ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.
ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನರೇಗಾ ನೌಕರರು ಶಾಸಕರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಮನವಿಯಲ್ಲಿ ರಾಜ್ಯದಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ನರೇಗಾ ಸಿಬ್ಬಂದಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸೇವಾ ಭದ್ರತೆ ಇಲ್ಲದ ಕಾರಣ ಅವರ ಕುಟುಂಬಗಳು ತೀವ್ರ ಅಸುರಕ್ಷಿತ ಸ್ಥಿತಿಯನ್ನು ಎದುರಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದರೂ, ಸಮಯಕ್ಕೆ ಸರಿಯಾಗಿ ವೇತನ ಪಾವತಿ ಆಗದಿರುವುದು ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿದ್ದು, ಕುಟುಂಬ ನಿರ್ವಹಣೆ, ವೈದ್ಯಕೀಯ ವೆಚ್ಚ, ಸಾಲಗಳ ಇಎಂಐ ಮರುಪಾವತಿ, ಮಕ್ಕಳ ಶಾಲಾ–ಕಾಲೇಜು ಶುಲ್ಕ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪೂರೈಸಲು ತೀವ್ರ ಸಂಕಷ್ಟ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಬಸವರಾಜ ರಾಯರಡ್ಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಸಮಗ್ರ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಅಧಿವೇಶನ ಕರೆದಿದ್ದಾರೆ ಎಂದು ತಿಳಿಸಿದರು. ಜನವರಿ 22 ರಿಂದ 31ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ನೌಕರರು ಹಾಗೂ ಕೂಲಿಕಾರರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದ್ದು, ನರೇಗಾ ನೌಕರರ ಬೇಡಿಕೆಗಳನ್ನೂ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ್ ಬಳಿಗಾರ, ಯಲಬುರ್ಗಾ–ಕುಕನೂರ ತಾಲೂಕಿನ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಸುರೇಶ್ ದೇಸಾಯಿ, ಎಂಐಎಸ್ ಸಂಯೋಜಕ ಗಿರೀಶ್, ಐಇಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕರಾದ ರಮೇಶ ಹಿರೇಮನಿ, ಕಿರಣಕುಮಾರ್, ನಾಗರಾಜ ಹಳ್ಳಿ, ಹುಸೇನ್ ಪಾಷಾ, ಸಂಗಮೇಶ, ಚೇತನ ಸೇರಿದಂತೆ ಹಲವರು ಉಪಸ್ಥಿತರಿದ್ದರು.







