ಕುಕನೂರು ಪಟ್ಟಣ ಪಂಚಾಯತ್ ಸಭೆಯಲ್ಲಿ ಅಮೃತ್ 2.0 ಕಾಮಗಾರಿ ವಿರುದ್ಧ ಆಕ್ರೋಶ
ಕುಡಿಯುವ ನೀರು, ಕಸ ವಿಲೇವಾರಿ ಮತ್ತು ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸದಸ್ಯರ ಒತ್ತಾಯ

ಕುಕನೂರು: ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಅಮೃತ್ 2.0 ಯೋಜನೆ, ಕುಡಿಯುವ ನೀರು, ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಸೇರಿದಂತೆ ಪಟ್ಟಣದ ಮೂಲಭೂತ ಸಮಸ್ಯೆಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು.
ಅಮೃತ್ 2.0 ಯೋಜನೆಯ ಕಾಮಗಾರಿಗಳ ಪ್ರಗತಿ ಕುರಿತು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನ ಸಭೆಯಲ್ಲಿ ಚರ್ಚಿಸಲಾದ ಕಾಮಗಾರಿಗಳ ಸ್ಥಿತಿ ಕುರಿತು ಮಾಹಿತಿ ಕೇಳಿದ ಸದಸ್ಯರು, ಪೂರ್ಣಗೊಂಡ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ವಿವರವನ್ನು ಸ್ಪಷ್ಟವಾಗಿ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ವಿಚಾರವನ್ನು ಸದಸ್ಯರು ಪ್ರಸ್ತಾಪಿಸಿದರು. ಸಮಸ್ಯೆ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿಯಿಂದ ಸಭೆಯಲ್ಲಿ ಸ್ಪಷ್ಟನೆ ಪಡೆಯಲಾಯಿತು.
ಕೆಇಬಿ ಕಾಲನಿಯಲ್ಲಿ ಹಂದಿ ಮತ್ತು ನಾಯಿ ಹಾವಳಿ, ಚರಂಡಿ ಸಮಸ್ಯೆ ಹಾಗೂ ಅಸ್ವಚ್ಛತೆ ಹೆಚ್ಚುತ್ತಿರುವ ಬಗ್ಗೆ ಸದಸ್ಯರು ಗಮನ ಸೆಳೆದರು. ಕಸ ವಿಲೇವಾರಿ ಮತ್ತು ಚರಂಡಿ ಸ್ವಚ್ಛತೆಗೆ ಸಮರ್ಪಕ ಕ್ರಮ ಕೈಗೊಳ್ಳದ ಕಾರಣ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೇಔಟ್ ಮಾಲೀಕರಿಗೆ ಸ್ವಚ್ಛತೆ ಕಾಪಾಡುವಂತೆ ನೋಟಿಸ್ ನೀಡಿದ್ದರೂ ಕೆಲವರು ಪಾಲನೆ ಮಾಡುತ್ತಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ಕಾರ್ಯವೈಖರಿ ವಿರುದ್ಧ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಪಟ್ಟಣದ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ ಹಾಗೂ ಮುಖ್ಯಾಧಿಕಾರಿ ನಾಗೇಶ್ ಉಪಸ್ಥಿತರಿದ್ದರು.
ಸಭೆಯಲ್ಲಿ ಶಿವರಾಜ ಯಲ್ಲಪ್ಪಗೌಡ್ರ, ವಿಜಯಲಕ್ಷ್ಮಿ ಸಬರದ, ಮಂಜುನಾಥ್ ಚೌದ್ರಿ, ಜಗನಾಥ್ ಭೋವಿ, ಸಿದ್ದಯ್ಯ ಉಳ್ಳಾಗಡ್ಡಿ, ಬಾಲರಾಜ ಗಾಳಿ, ಕವಿತಾ ಹೂಗಾರ್, ನೇತ್ರಾವತಿ ಹೂಗಾರ್, ಪ್ರಶಾಂತ್ ಆರ್. ಬೆರಳಿನ, ರಾಮಣ್ಣ ಬಂಕದಮನಿ, ಗಗನ ನೋಟಗಾರ್, ನೂರೋದ್ದೀನ್ ಗುಂಡಿಹಿಂದಲ್, ಮಂಜುನಾಥ್ ಕೊಳ್ಳದ, ಈರಣ್ಣ ಯಲಬುರ್ಗಿ, ರಫಿ ಹಿರೇಹಾಳ್ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.






