ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ

ಕೊಪ್ಪಳ.ಡಿ.10: ಮಾನವ ಹಕ್ಕುಗಳನ್ನು ಸಂರಕ್ಷಣೆ ಮಾಡುವಲ್ಲಿ ನಮ್ಮ ಮತ್ತು ನಿಮ್ಮ ಮೇಲೆ ಹೆಚ್ಚಿನ ರೀತಿಯ ಜವಾಬ್ದಾರಿಗಳು ಇವೆ. ಅದನ್ನು ಎಲ್ಲರೂ ಅರಿತು ಕೊಂಡು ಇನ್ನೂ ಹೆಚ್ಚಿನ ರಿತಿಯ ಕ್ರಮ ಕೈಗೊಳ್ಳುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.
ಬುಧವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸುರೇಶ ಬಿ.ಇಟ್ನಾಳ, ನಮ್ಮ ದೇಶದಲ್ಲಿ ಸಂವಿಧಾನಾತ್ಮಕ ಹಕ್ಕು, ಶಾಸನಬದ್ಧ ಹಕ್ಕು ಹಾಗೂ ಖಾಸಗಿ ಹಕ್ಕು ಎನ್ನುವ ಮೂರು ಬಗೆಯ ಹಕ್ಕುಗಳಿವೆ. ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ವಿರುದ್ಧದ ಹಕ್ಕು, ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ಕಲಿಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸುವ ಹಕ್ಕು, ಧಾರ್ಮಿಕ ಸಾತಂತ್ರ್ಯದ ಹಕ್ಕು, ಸಮಾನತೆಯ ಮತ್ತು ಸಂವಿಧಾನಾತ್ಮಕ ಪರಿಹಾರದ ಹಕ್ಕು ಸೇರಿ ಹಲವಾರು ಹಕ್ಕುಗಳು ನಮಗೆ ಸಂವಿಧಾನ ಬದ್ಧವಾಗಿ ಬಂದಿವೆ. ಹುಟ್ಟಿನಿಂದಲೇ ಎಲ್ಲರೂ ಮಾನವ ಹಕ್ಕುಗಳನ್ನು ಪಡೆದಿರುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಕ್ಕುಗಳು ಎಷ್ಟು ಮುಖ್ಯವೋ ಅಷ್ಟೇ ಕರ್ತವ್ಯಗಳು ಕೂಡ ಬಹಳ ಮುಖ್ಯ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಉದ್ಯೋಗದ ಬಗ್ಗೆ ನೋಡುವುದಾದರೆ, ಇವತ್ತು ಯಾವುದೇ ಒಂದು ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಕ್ಯಾಂಪಸ್ ಸಂದರ್ಶನ ನಡುಸಿದಾಗ, ಕೇವಲ ಶೇ.40 ಪ್ರತಿಶತ ಮಕ್ಕಳು ಉದ್ಯೋಗಕ್ಕೆ ಅರ್ಹರಿದ್ದಾರೆ ಎಂದು ಉದ್ಯೋಗದಾತರು ಹೇಳುತ್ತಾರೆ. ಉಳಿದ ಶೇ. 60ರಷ್ಟು ಮಕ್ಕಳು ಆಯ್ಕೆಯಾಗದಿರುವುದಕ್ಕೆ ಕಾರಣ ಅವರಲ್ಲಿನ ಕೌಶಲ್ಯಗಳ ಕೊರತೆಯನ್ನು ಕಾಣಬಹುದು. ಅದಕ್ಕಾಗಿ ಸರ್ಕಾರ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿಗಳನ್ನು ಕೊಡುತ್ತಿದ್ದು, ಅವುಗಳನ್ನು ನಾವು ಸರಿಯಾಗಿ ಅಳವಡಿಸಿಕೊಂಡು ಉದ್ಯೋಗ ಪಡೆಯಲು ಅರ್ಹರಾಗಬೇಕು. ಮಕ್ಕಳು ಇದರ ಕಡೆಗೆ ವಿಶೇಷ ಗಮನ ಹರಿಸುವಂತೆ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಮಾತನಾಡಿ, ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಒಬ್ಬ ಮನುಷ್ಯನನ್ನು ಮನುಷ್ಯನಾಗಿ ನೋಡಿಕೊಳ್ಳಲು ಅವಕಾಶ ಬೇಕು ಎನ್ನುವ ಕಾರಣಕ್ಕೆ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಇಂತಹ ಅವಕಾಶಗಳನ್ನು ನೀಡಿದ್ದರು ಸಹ ಇಂದಿನ ದಿನಗಳಲ್ಲಿ ನಾವು ತಾರತಮ್ಯಗಳನ್ನು ಕಾಣಬಹುದಾಗಿದೆ. ವಿಶೇಷವಾಗಿ ನಮ್ಮ ಭಾಗದಲ್ಲಿ ಕೆಲವು ಕಡೆ ಇಂದಿಗೂ ಅಸ್ಪೃಶ್ಯತೆ ಆಚರಣೆಯನ್ನು ಅನುಸರಿಸಲಾಗುತ್ತಿದೆ. ಇದು ಒಂದು ಮಾನವ ಹಕ್ಕುಗಳ ಉಲ್ಲಂಘನೆಗೆ ಉದಾಹರಣೆಯಾಗಿದೆ. ಇಂತಹ ಆಚರಣೆಯನ್ನು ನಿರ್ಮೂಲನೆ ಮಾಡಿದಾಗ ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದರು.
ಒಬ್ಬರ ಹಕ್ಕುಗಳನ್ನು ಮತ್ತೊಬ್ಬರು ಉಲ್ಲಂಘನೆ ಮಾಡದಂತೆ ನೊಡಿಕೊಳ್ಳಬೇಕು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಹೋರಾಟಗಳನ್ನು ನಾವು ಕಾಣುತ್ತೇವೆ. ಆ ಎಲ್ಲಾ ಹೋರಾಟಗಳ ಫಲವನ್ನು ಈ ಸಂವಿಧಾನದಲ್ಲಿ ಕಂಡಿದ್ದೇವೆ. ಹಾಗಾಗಿ ಸಂವಿಧಾನದ ಆಶಯಗಳನ್ನು ನಾವು ಸರಿಯಾದ ರೀತಿಯಲ್ಲಿ ಪಾಲನೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭುರಾಜ್ ನಾಯಕ ಅವರು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ವ್ಯವಸ್ಥಾಪಕ ಹರೀಶ್ ಜೋಗಿ, ಕೊಪ್ಪಳ ತಹಶೀಲ್ದಾರ ವೀಠ್ಠಲ್ ಚೌಗಲಾ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







