ಖರ್ಗೆ ಭಾಗವಹಿಸಿದ್ದ ಮೈದಾನ ‘ಶುದ್ಧೀಕರಣ’ ಖಂಡಿಸಿ ಕೊಪ್ಪಳದಲ್ಲಿ ಪ್ರತಿಭಟನೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಮನವಿ

ಕೊಪ್ಪಳ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಾರ್ವಜನಿಕ ಸಭೆಯ ಬಳಿಕ, ಸ್ಥಳೀಯ ಸಂಘಟನೆಯೊಂದು ಗಂಗಾಜಲ ಹಾಗೂ ಹವನದ ಮೂಲಕ ಮೈದಾನವನ್ನು ‘ಶುದ್ಧೀಕರಣ’ ಮಾಡಿರುವುದನ್ನು ಖಂಡಿಸಿ ಕೊಪ್ಪಳದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಅಶೋಕ ವೃತ್ತದಲ್ಲಿ ಜನಪರ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪ ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಖರ್ಗೆ ಅವರು ಭಾಗವಹಿಸಿದ್ದ ಸ್ಥಳವನ್ನು ‘ಅಶುದ್ಧ’ ಎಂಬಂತೆ ಬಿಂಬಿಸುವುದು ಸಂವಿಧಾನದ ಸಮಾನತೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಯ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇಂತಹ ಘಟನೆಗಳು ಜಾತೀಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಗೆ ಸಂಬಂಧಿಸಿದ ಸಂಘಟನೆ ಹಾಗೂ ಆಯೋಜಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಇಂತಹ ಸಂವಿಧಾನವಿರೋಧಿ ಘಟನೆಗಳು ಮರುಕಳಿಸದಂತೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಐಕ್ಯತೆಯಿಂದ ಇಂತಹ ವಿಭಜಕ ಮನಸ್ಥಿತಿಗಳ ವಿರುದ್ಧ ಹೋರಾಡಬೇಕು ಎಂದು ಮುಖಂಡರು ಕರೆ ನೀಡಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ಕಾನೂನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು, ಸಿಐಟಿಯು ಮುಖಂಡ ಹನುಮೇಶ ಕಲ್ಮಂಗಿ, ದಲಿತ ಯುವ ವೇದಿಕೆಯ ಸಂಚಾಲಕ ಸುಂಕಪ್ಪ ಮೀಸಿ, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಪಾತ್ರೋಟಿ, ಗಂಗಾವತಿ ತಾಲೂಕಾ ಸಂಚಾಲಕ ಚಾಂದ್ ಪಾಷ ಗಂಗಾವತಿ, ಕೆ.ಮರಿಯಪ್ಪ ಕುಲಮಿ, ಸಂಗಪ್ಪ, ಮುಹಮ್ಮದ್, ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿಮಠ, ಜಮೀಯತೆ ಉಲ್ಮಾಯ ಹಿಂದ್ ತಾಲೂಕು ಉಪಾಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ, ಕಾನೂನು ವಿದ್ಯಾರ್ಥಿಗಳಾದ ಹನುಮೇಶ ಛಲವಾದಿ, ಹುಲಿಗೇಶ್ ಬೈಲತ್ಗೇರಿ, ಮುಹಮ್ಮದ್ ಜಾವೀದ್, ಮುಹಮ್ಮದ್ ಆಸಿಫ್ ಫೈಝಲ್ ರಹೆಮಾನ್, ಅತಿಖುರ್ ರಹೆಮಾನ್, ಮುಹಮ್ಮದ್ ಬಿಲಾಲ್, ಗಾಳೆಪ್ಪ ಮುಂಗೋಲಿ, ಆದಿತ್ಯ ಟಿ.ಪಾತ್ರೋಟಿ, ಹಾಗೂ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.






