ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಇಬ್ಬರು ಆರೋಪಿಗಳ ಸ್ಥಳ ಮಹಜರು

ಕೊಪ್ಪಳ: ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಒಬ್ಬನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ರವಿವಾರ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ.
ಗಂಗಾವತಿ ತಾಲೂಕಿನ ಸಾಯಿನಗರದ ನಿವಾಸಿಗಳಾದ ಮಲ್ಲೇಶ್(22) ಮತ್ತು ಚೇತನ್ ಸಾಯಿ ಸಿಳ್ಳೇಕ್ಯಾತರ್(21) ಎಂಬ ಇಬ್ಬರು ಅರೋಪಿಗಳನ್ನು ಶನಿವಾರ ಬಂಧಿಸಲಾಗಿತ್ತು. ತನಿಖೆಯ ಮುಂದುವರಿದ ಭಾಗವಾಗಿ ಘಟನಾ ಸ್ಥಳಕ್ಕೆ ಇಂದು ಪೊಲೀಸರು ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದರು.
ಪ್ರಕರಣದ ಹಿನ್ನೆಲೆ: ಇಬ್ಬರು ವಿದೇಶಿಯರು ಸೇರಿ ಐವರು ಪ್ರವಾಸಿಗರು ಶುಕ್ರವಾರ ರಾತ್ರಿ ವಾಯು ವಿವಾಹರಕ್ಕೆಂದು ಸಣಾಪುರದ ಕೆರೆಬಳಿ ಕುಳಿತಿತ್ತು. ಈ ವೇಳೆ ಆಗಮಿಸಿದ ಮೂವರು ಯುವಕರು ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸುವಂತೆ ಒತ್ತಾಯಿಸಿದ್ದಾರೆ. ಆಗ ಪ್ರವಾಸಿಗರು 20 ರೂ. ನೀಡಿದ್ದಾರೆ. ಇದನ್ನು ನಿರಾಕರಿಸಿದ ದುಷ್ಕರ್ಮಿಗಳು ಪ್ರವಾಸಿಗರೊಂದಿಗೆ ಜಗಳಕ್ಕಿಳಿದು ಕಲ್ಲಿಂದ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಮೆರಿಕದ ಡೇನಿಯಲ್, ಮಹಾರಾಷ್ಟ್ರ ಮೂಲದ ಪಂಕಜ್ ಮತ್ತು ನಾಸಿಕ್ ನ ಬಿಬಾಷ್ ಎಂಬ ಮೂವರನ್ನು ತುಂಗಭದ್ರ ಎಡದಂಡೆ ಕಾಲುವೆಗೆ ತಳ್ಳಿದ ದುಷ್ಕರ್ಮಿಗಳು ಇಸ್ರೇಲ್ ಮೂಲದ ಮತ್ತು ಸ್ಥಳೀಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದರು.
ಡೇನಿಯಲ್ ಮತ್ತು ಪಂಕಜ್ ಈಜಿ ದಡ ಸೇರಿ ಪಾರಾಗಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದ ಓಡಿಶಾ ಮೂಲದ ಬಿಬಾಶ್ ಮೃತದೇಹ ಶನಿವಾರ ಪೂರ್ವಾಹ್ನ 11:30ಕ್ಕೆ ತಾಲೂಕಿನ ಮಲ್ಲಾಪುರ ಬಳಿ ಕಾಲುವೆಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಆರು ತಂಡ ರಚನೆ ಮಾಡಲಾಗಿದೆ.