ಕೊಪ್ಪಳ: ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ; ಪ್ರಕರಣ ದಾಖಲು
ಮೂವರ ಮೇಲೆ ಕಲ್ಲಿನಿಂದ ಹಲ್ಲೆ, ಕಾಲುವೆಗೆ ಎಸೆಯಲ್ಪಟ್ಟ ಓರ್ವ ಮೃತ್ಯು

ಹಲ್ಲೆಗೊಳಗಾದ ಪ್ರವಾಸಿಗರು
ಗಂಗಾವತಿ/ಕೊಪ್ಪಳ: ಪ್ರವಾಸಿ ತಾಣವಾದ ತಾಲೂಕಿನ ಸಣಾಪುರ ಗ್ರಾಮದಲ್ಲಿ ವಾಯುವಿಹಾರಕ್ಕೆಂದು ಹೊರಗೆ ಹೋಗಿದ್ದ ಸಂದರ್ಭದಲ್ಲಿ ವಿದೇಶಿಯರಿದ್ದ ಗುಂಪಿನ ಮೇಲೆ ಮೂವರು ಯುವಕರು ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ಗುರುವಾರ ರಾತ್ರಿ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕ ಗಿಟಾರ್ ಬಾರಿಸುತ್ತ ಕುಳಿತಿದ್ದ ಐವರು ಪ್ರವಾಸಿಗರ ಪೈಕಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇಸ್ರೇಲ್ನ 27 ವರ್ಷದ ಪ್ರವಾಸಿ ಮಹಿಳೆ ಮತ್ತು 29 ವರ್ಷದ ಹೋಮ್ ಸ್ಟೇ ಮಾಲಕಿಯಾದ ಸ್ಥಳೀಯ ಮಹಿಳೆ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಮೂವರು ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಆ ಗುಂಪಿನಲ್ಲಿದ್ದ ಒಡಿಶಾದ ಪ್ರವಾಸಿಗನನ್ನು ಕಾಲುವೆಗೆ ಎಸೆಯಲಾಗಿದ್ದು, ಆತ ನಾಪತ್ತೆಯಾಗಿದ್ದ. ಶೋಧ ಕಾರ್ಯದ ಬಳಿಕ ಗಂಗಾವತಿ ತಾಲೂಕಿನ ಮಲ್ಲಾಪೂರ ಬಳಿ ಪವರ್ ಹೌಸ್ ಬಳಿ ಶನಿವಾರ (ಮಾ.8) ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಸ್ಥಳೀಯ ಸಾಣಾಪೂರ ಈಜುಗಾರರು ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ ನಂತರ ದುಷ್ಕರ್ಮಿಗಳು ಎಡದಂಡೆ ಕಾಲುವೆ ನೂಕಲ್ಪಟ್ಟಿದ್ದ ಒರಿಸ್ಸಾ ಮೂಲದ ಪ್ರವಾಸಿಗ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಎರಡು ತನಿಖಾ ತಂಡಗಳನ್ನು ರಚಿಸಿ ಆನೆಗೊಂದಿ, ಜಂಗ್ಲಿ,ಸಾಣಾಪೂರ ,ಹನುಮನಹಳ್ಳಿಯಲ್ಲಿ ಲಭ್ಯವಿರುವ ಸಿಸಿ ಕ್ಯಾಮಾರಾಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.
ಘಟನೆ ಹಿನ್ನೆಲೆ:
‘ಇಸ್ರೇಲ್, ಅಮೆರಿಕ, ಮಹಾರಾಷ್ಟ್ರ ಮತ್ತು ಒಡಿಶಾದಿಂದ ನಾಲ್ವರು ಪ್ರವಾಸಿಗರು ಮತ್ತು ಸ್ಥಳೀಯ ಹೋಂ ಸ್ಟೇ ಒಡತಿ ರಾತ್ರಿ ಸಮಯದಲ್ಲಿ ಗಿಟಾರ್ ಬಾರಿಸುತ್ತಾ ಕೆರೆಯ ಬಳಿ ಕುಳಿತಿದ್ದರು. ಆ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಮೂವರು ಯುವಕರಿದ್ದ ಗುಂಪು ಮೊದಲು ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸುವಂತೆ ಹೇಳಿದ್ದು, ಬಳಿಕ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಇದನ್ನು ವಿರೋಧಿಸಿದ ಪ್ರವಾಸಿಗರು ಮತ್ತು ಆ ಮೂರು ಜನ ಯುವಕರ ಮಧ್ಯೆ ಜಗಳ ನಡೆದಿದೆ.
‘ಇಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆಯರು ದೂರು ನೀಡಿದ್ದು, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆಗೆ ಯತ್ನ ಕಾಯ್ದೆಗಳಡಿ ಎಫ್ಐಆರ್ ದಾಖಲಿಸಲಾಗಿದೆ. ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.