ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಮನವಿ

ಕೊಪ್ಪಳ: ಮುಂದೆ ಬರಲಿರುವ ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ರಕ್ಷಿಸಲು ವಿಶೇಷ ಕ್ರಮ ಕೈಗೊಳ್ಳುವ ಹಾಗೂ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸೋಮೋಟೊ ಕೇಸ್ ದಾಖಲಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಆರಸಿದ್ದಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಕುರಿತು ಪ್ರಕಟಣೆ ನೀಡಿರುವ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೊಪ್ಪಳವು, ಶಾಂತಿ, ಸೌಹಾರ್ದತೆಗೆ ಹೆಸರಾಗಿರುವ ನಾಡು. ಈ ಹಿಂದೆ ಗಣೇಶ ವಿಸರ್ಜನೆ ಸಮಯದಲ್ಲಿ ಸಣ್ಣ ಪುಟ್ಟ ಗಲಾಟೆಗಳು ಸಂಭವಿಸಿವೆ. ಆದರೆ ಇತ್ತಿಚೆಗೆ ಗವಿಸಿದ್ದಪ್ಪ ನಾಯಕ ಕೊಲೆ ನಡೆದ ದಿನದಿಂದ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ದಿನಕ್ಕೊಬ್ಬರು ಮೃತನ ಮನೆಗೆ ಬಂದು ಸಾಂತ್ವನ ಹೇಳುವ ನೆಪದಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಈ ಕಾರಣದಿಂದ ಊರಿನ ಶಾಂತಿ ಸೌಹಾರ್ದತೆಗೆ ಧಕ್ಕೆಯಾದಂತಾಗಿದೆ. ಇದು ಹೀಗೆ ಮುಂದುವರಿಯಲು ಬಿಟ್ಟರೆ ಇನ್ನೇನಾದರೂ ಕೆಟ್ಟ ಬೆಳವಣಿಗೆ ಆಗದಂತೆ ತಾವು ಮುಂಜಾಗ್ರತೆಯನ್ನು ವಹಿಸಬೇಕೆಂದು ಒತ್ತಾಯಿಸಿದೆ.
ಗವಿಸಿದ್ದಪ್ಪ ನಾಯಕ್ ಕೊಲೆಯನ್ನು ಎಲ್ಲರೂ ಖಂಡಿಸಲೇ ಬೇಕು. ಈ ಕೊಲೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿದ ಮೇಲೂ ಇಲ್ಲ ಸಲ್ಲದ ಗಾಳಿ ಸುದ್ದಿಯನ್ನು ಹಬ್ಬಿಸಿ ಜನರನ್ನು ಪ್ರಚೋದಿಸುವ ಹೇಳಿಕೆ ನೀಡುವುದು ಮುಂದುವರೆದಿದೆ ಆ ಕಾರಣಕ್ಕೆ ಕೊಪ್ಪಳದಲ್ಲಿ ಅನಗತ್ಯ ಗೊಂದಲಗಳು ಶುರುವಾಗಿವೆ ಇದನ್ನು ತಡೆಯಬೇಕು ಎಂದು ಆಗ್ರಹಿಸಿದೆ.
ಕೆಲವು ಕೋಮುವಾದಿ ಸಂಘಟನೆಗಳು ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ತಮ್ಮ ಅಜೆಂಡಾವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿವೆ. ಒಂದು ಸಮುದಾಯವನ್ನು ಗುರಿ ಮಾಡಿ ಮಾತನಾಡುತ್ತಿವೆ. ಇದು ಹೀಗೆಯೇ ಮುಂದುವರೆಯ ಬಾರದೆಂಬುದು ನಮ್ಮೆಲ್ಲರ ಆಶಯ. ಗವಿಸಿದ್ದಪ್ಪ ನಾಯಕ್ ಮನೆಗೆ ಭೇಟಿ ನೀಡಿ, ಆ ಕುಟುಂಬದವರಿಗೆ ಸಾಂತ್ವನ ಹೇಳುವ ಹೆಸರಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದಿದ್ದಾರೆ. ಹಿಂದು ಹುಡುಗ ಮುಸ್ಲಿಮ್ ಹುಡುಗಿಯನ್ನು ಮದುವೆಯಾದರೆ 5 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ಮುಂದುವರೆದು ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಮುಸ್ಲಿಮ್ ಸರ್ಕಾರ ಎಂಬ ಮನುಷ್ಯ ವಿರೋಧಿ ಹೇಳಿಕೆಗಳನ್ನು ನೀಡಿ, ಅಮಾಯಕ ಹಿಂದೂ ಹುಡುಗರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಈ ಅಪಾಯಕಾರಿ ಹೇಳಿಕೆಯ ವಿರುದ್ದ ಸ್ವತಃ ಇಲಾಖೆಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದೆ.
ಸೌಹಾರ್ದತೆಗೆ ಧಕ್ಕೆ ತಂದ ಎಲ್ಲಾ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹಿರಿಯ ಮುಖಂಡ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು,ಬಸವರಾಜ್ ಶೀಲವಂತರ್, ಮಹಾಂತೇಶ ಕೋತಬಾಳ, ಎಸ್.ಎ.ಗಫಾರ್. ಚನ್ನಬಸಪ್ಪ ಅಪ್ಪಣವರ್, ಕೆ.ಬಿ.ಗೊನಾಳ, ಗಾಳೆಪ್ಪ ಮುಂಗೊಲಿ,ಮಖಬೂಲ್ ರಾಯಚೂರು,ಶಿವಪ್ಪ ಹಡಪದ್ ರಿದ್ದ ನಿಯೋಗ ಒತ್ತಾಯಿಸಿದೆ.







