ಸಚಿವ ಸಂಪುಟ ಪುನರ್ ರಚನೆ ಬಳಿಕವೂ ಸಚಿವನಾಗಿರುತ್ತೇನೆ ಎಂಬ ಭರವಸೆ ನನಗಿದೆ: ಶಿವರಾಜ್ ತಂಗಡಗಿ ವಿಶ್ವಾಸ

ಸಚಿವ ಶಿವರಾಜ್ ಎಸ್.ತಂಗಡಗಿ
ಕೊಪ್ಪಳ: "ಜನರ ಆಶೀರ್ವಾದ, ಕನಕ ಚಲಪತಿ ಕೃಪೆಯಿಂದ ಸಚಿವ ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿರುತ್ತೇನೆ ಎಂಬ ಭರವಸೆ ನನಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿನ ಕಾರ್ಯಕ್ರಮದ ಬಳಿಕ ಸುದ್ದಿಗಾರರು, "ಸಚಿವ ಸಂಪುಟ ಸರ್ಜರಿ ಬಳಿಕ ನಿಮ್ಮ ಸ್ಥಾನ-ಮಾನದ ಕತೆ ಏನು"? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸಚಿವ ಸಂಪುಟದ ಸರ್ಜರಿ ಅವಶ್ಯಕತೆ ಇದೆ. ಏಳೆಂಟು ವರ್ಷಗಳಿಂದ ಶಾಸಕರಾಗಿರುವವರಿಗೆ ಸಚಿವರಾಗುವ ಆಸೆ ಇದ್ದೇ ಇದೆ. ಹೀಗಾಗಿ ಹೈಕಮಾಂಡ್ ಭೇಟಿಗೆ ಹೋಗುವುದು ಸಹಜ. ಜನರ ಆಶೀರ್ವಾದ, ಕನಕ ಚಲಪತಿಯ ಕೃಪೆಯಿಂದ ಮುಂದೆ ಸಹ ನಾನು ಸಚಿವ ಸ್ಥಾನದಲ್ಲಿ ಮುಂದುವರೆಯತ್ತೇನೆ" ಎಂದರು.
"ವರಿಷ್ಠರು ಹೈಕಮಾಂಡ್ ಭೇಟಿ ಮಾಡುವುದರಲ್ಲಿ ತಪ್ಪೇನಿದೇ?. ಕೇಂದ್ರದ ಎಚ್.ಡಿ. ಕುಮಾರಸ್ವಾಮಿ ಅಥವಾ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಮ್ಮ ಪಕ್ಷದವರು ತೆರಳಿಲ್ಲ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.




