ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಡೀ ಜಗತ್ತಿಗೆ ಮಾದರಿ ಎನಿಸಿದೆ : ಶಿವರಾಜ್ ತಂಗಡಗಿ

ಕೊಪ್ಪಳ : ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಡೀ ಜಗತ್ತಿಗೆ ಮಾದರಿ ಎನಿಸಿದ್ದು, ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ನೆಲೆಗಟ್ಟು ಭದ್ರವಾಗಿ ನಿಂತಿದೆ. ಸಂವಿಧಾನದ ಭದ್ರ ಅಡಿಪಾಯ ಹಾಕಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರ ಋಣಿಗಳಾಗಿರಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಕೊಪ್ಪಳದಲ್ಲಿ 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನವು ವಿಶ್ವದ ಬೃಹತ್ ಸಂವಿಧಾನವಾಗಿದ್ದು, 448 ವಿಧಿಗಳು, 12 ಪರಿಚ್ಛೇಧಗಳು, 103ಕ್ಕೂ ಹೆಚ್ಚು ಬಾರಿ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನವಾಗಿರುತ್ತದೆ ಎಂದರು.
ನಮ್ಮ ರಾಜ್ಯ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಪಂಚ ಗ್ಯಾರಂಟಿ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಿದ್ದು, ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಸೇರಿದಂತೆ ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರಕಾರ ವಿವಿಧ ಸಮಾಜ ಮುಖಿ ಕಾರ್ಯಗಳನ್ನು ಜಾರಿಗೆ ತಂದಿದೆ ಎಂದರು.
ಕಳೆದ ವರ್ಷ ಜೂನ್ ನಲ್ಲಿ ಆರಂಭಗೊಂಡ ಶಕ್ತಿ ಯೋಜನೆಯು ಜನಪ್ರಿಯ ಯೋಜನೆಯಾಗಿ ಮೆಚ್ಚುಗೆ ಗಳಿಸಿದೆ. ಗೃಹಜ್ಯೋತಿ ಯೋಜನೆಯಡಿ 2024ರ ಡಿಸೆಂಬರ್ 31ರವರೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 2,83,712 ಗ್ರಾಹಕರ ಪೈಕಿ 2,77,262 ಫಲಾನುಭವಿಗಳು ನೋಂದಾಯಿಸಿದ್ದು, ಶೇ 97.64 ರಷ್ಟು ಪ್ರಗತಿಯಾಗಿದ್ದು, ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡಬೇಕಾದ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಸದಸ್ಯರಿಗೆ 170 ರೂ.ನಂತೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಜುಲೈ-2023 ರಿಂದ ಸೆಪ್ಟೆಂಬರ್-2024 ರವರೆಗೆ 260.20 ಕೋಟಿ ರೂಪಾಯಿಗಳನ್ನು ಕಾರ್ಡುದಾರ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ 6,783 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು ಮೊತ್ತ 6,50,79,000 ರೂ.ಗಳನ್ನು ನಿರುದ್ಯೋಗ ಭತ್ಯೆಗಾಗಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಪರಿಷತ್ ಸದಸ್ಯೆ ಹೇಮಲತಾ ನಾಯಕ, ಸಂಸದ ರಾಜಶೇಖರ ಹಿಟ್ನಾಳ್, ನಗರ ಸಭೆ ಅಧ್ಯಕ್ಷ ಅಮ್ಜದ್ ಪಾಟೇಲ್,ಮತ್ತು ಕೂಡ ಅಧ್ಯಕ್ಷ ಶ್ರೀನಿವಾಸ ಗುಪ್ತ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.







