ಕನಕಗಿರಿ | ಬಂಕಾಪುರದಲ್ಲಿ ಹಳೆಗನ್ನಡ ಲಿಪಿಯಲ್ಲಿ ಆರು ಶಾಸನಗಳು ಪತ್ತೆ

ಕೊಪ್ಪಳ: ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದ ವಿವಿಧ ಸ್ಥಳದಲ್ಲಿ ಹೊಸದಾಗಿ ಆರು ಶಾಸನಗಳನ್ನು ಸಂಶೋಧಕ ಡಾ.ಇಮಾಮ್ ಸಾಹೇಬ್ ಹಡಗಲಿ ಪತ್ತೆ ಹಚ್ಚಿದ್ದಾರೆ. ಆರು ಶಾಸನಗಳಲ್ಲಿ ಅಕ್ಷರಗಳು ಅಸ್ಪಷ್ಟವಾಗಿದ್ದು, ಓದಲು ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗಾಳೇರ ಹೊಲದಲ್ಲಿರುವ ದೊಡ್ಡ ಗುಂಡುಗಳ ಗುಂಪಿನಲ್ಲಿ ಕರಿಯ ಕಲ್ಲಿನ ಮೇಲೆ ಶಾಸನವಿದೆ ಇದು ಆರು ಸಾಲಿನ ಶಾಸನವಾಗಿದ್ದು ಹಳೆಗನ್ನಡ ಲಿಪಿಯಲ್ಲಿ ಇದೆ. ಇದೇ ಗಾಳೇರ ಹೊಲದಲ್ಲಿ ರಸ್ತೆ ಬದಿಯಲ್ಲಿರುವ ಕಲ್ಲು ಗುಂಡಿಗೆ ಇರುವ ಶಾಸನ ದೀರ್ಘವಾದ ಮೂರು ಸಾಲಿನ ಶಾಸನವಾಗಿದೆ.
ಬುರುಡೆರ ಹೊಲದಲ್ಲಿ ನೆಲದ ಮೇಲಿರುವ ಬಂಡೆಯ ಮೇಲೆ ಕಾಣುವ ಮೂರನೆ ಶಾಸನ ದೀರ್ಘ ಸಾಲಿನ ಶಾಸನವಾಗಿದೆ.
ಬಂಕಾಪುರದಿಂದ ಸುಳೇಕಲ್ ಗ್ರಾಮಕ್ಕೆ ಹೋಗುವ ದಾರಿಯ ಎಡಭಾಗದಲ್ಲಿ ಮೂರು ಅಡಿ ಕಲ್ಲಿನ ಗುಂಡಿನ ಮೇಲೆ ಅಕ್ಷರಗಳನ್ನು ಕೆತ್ತಲಾಗಿದೆ.
ಲೋಕಪ್ಪಯ್ಯನ ಮರಡಿಯ ಮೇಲೆ ಕಾವಲು ಗೋಪುರದ ಎಡ ಭಾಗದಲ್ಲಿ ಇರುವ ದೊಡ್ಡ ಕಲ್ಲು ಬಂಡೆಯ ಹಿಂಭಾಗದಲ್ಲಿ ಆರು ಸಾಲಿನ ಶಾಸನವಿದೆ ಈ ಶಾಸನವು ಶ್ರೀ ಗುರು ಕೃಪಾ ಎಂಬ ಅಕ್ಷರದಿಂದ ಆರಂಭವಾಗುತ್ತದೆ ಎಂದು ಡಾ.ಇಮಾಮ್ ಸಾಹೇಬ್ ತಿಳಿಸಿದ್ದಾರೆ.
ಸುಳೇಕಲ್ ಗ್ರಾಮಕ್ಕೆ ಹೋಗುವಾಗ ಕಂಡುಬಂದಿರುವ ಐದನೇ ಶಾಸನ ಎರಡು ಸಾಲಿನ ಚಿಕ್ಕ ಶಾಸನವಾಗಿದೆ ಎಂದು ವಿವರಿಸಿದ್ದಾರೆ.
ಈ ಗ್ರಾಮದಲ್ಲಿ 2021ರಲ್ಲಿ ಕ್ಷೇತ್ರ ಕಾರ್ಯವನ್ನು ಕೈಗೊಂಡು ಇಲ್ಲಿರುವ ಶಾಸನಗಳನ್ನು ಸಂಪೂರ್ಣವಾಗಿ ಗುರುತಿಸಲಾಗಿತ್ತು. ಆದರೆ ಅವುಗಳನ್ನು ಹೊರ ಜಗತ್ತಿಗೆ ಪರಿಚಯಿಸಿರಲಿಲ್ಲ. ಈ ಶಾಸನಗಳು ಕನಕಗಿರಿ ಇತಿಹಾಸಕ್ಕೆ ಮತ್ತಷ್ಟು ಹೊಸ ಬೆಳಕನ್ನು ಚೆಲ್ಲುವ ಶಾಸನಗಳಾಗಿದ್ದು ಮುಂದಿನ ದಿನಗಳಲ್ಲಿ ಇವುಗಳ ಅಧ್ಯಯನಕ್ಕಾಗಿ ಶಾಸನ ತಜ್ಞರಾದ ಶರಣಬಸಪ್ಪ ಕೋಲ್ಕರ ಹಾಗೂ ಜಾಜಿ ದೇವೇಂದ್ರಪ್ಪ ಅವರ ಬಳಿಗೆ ಕಳುಹಿಸಿಕೊಡಲಾಗುವುದು. ಅವಶ್ಯಕತೆ ಬಿದ್ದರೆ ಮೈಸೂರು ಎಎಸ್ಐ ಅವರಿಗೆ ಕಳುಹಿಸಿಕೊಡಲಾಗುವುದು ಎಂದರು.
ಶಾಸನ ಪತ್ತೆ ಹಚ್ಚುವಲ್ಲಿ ಬಂಕಾಪುರ ಗ್ರಾಮದ ವಿದ್ಯಾರ್ಥಿ ಬಸವರಾಜ, ಮಂಜುನಾಥ ಹುಗ್ಗಿ, ಮಹೇಶ್ ಕೆಬಿ ಸಹಕಾರ ನೀಡಿದ್ದಾರೆ ಎಂದು ಡಾ.ಇಮಾಮ್ ಸಾಹೇಬ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







